ಬೆಂಗಳೂರು: ಕೊಲೆ ಪ್ರಕರಣದಡಿ ಈಗಾಗಲೇ ನಟ ದರ್ಶನ್ ಅರೆಸ್ಟ್ ಆಗಿದ್ದಾರೆ. ಇದರ ಬೆನ್ನಲ್ಲಿಯೇ ದರ್ಶನ್ ಗೆಳತಿ ಪವಿತ್ರಾಗೌಡರನ್ನು (Pavithra Gowda) ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರ್.ಆರ್.ನಗರ ಠಾಣೆಯ ಪೊಲೀಸರು ಪವಿತ್ರಾಗೌಡರನ್ನು ವಶಕ್ಕೆ ಪಡೆದಿದ್ದಾರೆ. ಪವಿತ್ರಾಗೌಡರನ್ನು ವಶಕ್ಕೆ ಪಡೆದಿರುವ ಆರ್.ಆರ್. ನಗರ ಪೊಲೀಸ್ ಇನ್ಸ್ ಪೆಕ್ಟರ್ ಮಾರ್ಕಂಡಯ್ಯ ಅವರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ 10 ಜನರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ರ್ಯಾಡಿಸನ್ ಹೋಟೆಲ್ ನಲ್ಲಿ ದರ್ಶನ್ ಅರೆಸ್ಟ್ ಆಗಿದ್ದಾರೆ.
ದರ್ಶನ್, ಪಟ್ಟಣಗೆರೆ ಜಯಣ್ಣ ಪುತ್ರ ವಿನಯ್, ಕಿರಣ್, ಮಧು, ಲಕ್ಷ್ಮಣ್, ಆನಂದ್, ರಾಘವೇಂದ್ರ ಸೇರಿದಂತೆ 10 ಜನರನ್ನು ಅರೆಸ್ಟ್ ಮಾಡಿದ್ದಾರೆ. ಅಲ್ಲದೇ, ಬೆಂಗಳೂರಿನಲ್ಲಿ ದರ್ಶನ್ ಗೆಳತಿ ಪವಿತ್ರಾಗೌಡರನ್ನು ವಶಕ್ಕೆ ಪಡೆಯಲಾಗಿದೆ. ಮೈಸೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಡಿಸಿಪಿ ಗಿರೀಶ್, ಎಸಿಪಿ ಚಂದನ್ರಿಂದ ನಟ ದರ್ಶನ್ ವಿಚಾರಣೆ ನಡೆಯುತ್ತಿದೆ. ದರ್ಶನ್ ಬಂಧನವಾಗಿರುವ ಹಿನ್ನೆಲೆಯಲ್ಲಿ ಅನ್ನಪೂರ್ಣೇಶ್ವರಿನಗರ ಠಾಣೆ ಹತ್ತಿರ ಬಿಗಿ ಬಂದೋಬಸ್ತ್ ಹಾಕಲಾಗಿದೆ.
ಕೊಲೆಯಾಗಿರುವ ರೇಣುಕಾಸ್ವಾಮಿ ಕೂಡ ದರ್ಶನ್ ಅಭಿಮಾನಿ ಎನ್ನಲಾಗಿದೆ. ದರ್ಶನ್, ವಿಜಯಲಕ್ಷ್ಮೀ ಸಂಸಾರ ಬಗ್ಗೆ ಯೋಚನೆ ಮಾಡ್ತಿದ್ದ ಸ್ವಾಮಿ, ದಂಪತಿ ಸಂಸಾರದಲ್ಲಿ ಪವಿತ್ರಾಗೌಡ ಬರುತ್ತಿದ್ದಾಳೆಂದು ತಿಳಿದು ಮೆಸೇಜ್ ಮಾಡಿದ್ದ. ಪವಿತ್ರಾಗೌಡಗೆ ಮೆಸೇಜ್ ಮಾಡಿದ್ದಕ್ಕೆ ಈ ಕೊಲೆಯಾಗಿದೆ ಎನ್ನಲಾಗಿದೆ.
