ನವದೆಹಲಿ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೂರನೇ ಅಧಿಕಾರ ಯುಗ ಆರಂಭವಾಗಿದೆ. ಭಾನುವಾರ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅವರು, ಕಚೇರಿಗೆ ತೆರಳಿ ಅಧಿಕಾರ ಆರಂಭಿಸಿದ್ದಾರೆ. ಮೊದಲ ದಿನವೇ ರೈತರ ಕಲ್ಯಾಣ ಯೋಜನೆಯಾದ ‘ಪಿಎಂ ಕಿಸಾನ್ ನಿಧಿ’ಗೆ ಸಂಬಂಧಿಸಿದ ಕಡತಕ್ಕೆ ಮೊದಲ ಸಹಿ ಹಾಕಿದ್ದಾರೆ.
ಪಿಎಂ ಕಿಸಾನ್ ನಿಧಿ ಅಡಿ ರೈತರಿಗೆ ಆರ್ಥಿಕ ನೆರವು ನೀಡುವ ಯೋಜನೆಯಲ್ಲಿ 17ನೇ ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದ ಫೈಲ್ ಗೆ ಮೋದಿ ಮೊದಲ ಸಹಿ ಹಾಕಿದ್ದಾರೆ. ಈ ಯೋಜನೆ ಸುಮಾರು 20 ಸಾವಿರ ಕೋಟಿ ರೂ ಮೊತ್ತ ಒಳಗೊಂಡಿದ್ದು, 9.3 ಕೋಟಿ ರೈತರಿಗೆ ಅದು ಸಹಕಾರಿಯಾಗಿದೆ.
ಅಧಿಕಾರ ವಹಿಸಿಕೊಂಡ ನಂತರ ರೈತರ ಕಲ್ಯಾಣಕ್ಕೆ ಸಂಬಂಧಿಸಿದ ಮೊದಲ ಕಡತಕ್ಕೆ ಸಹಿ ಹಾಕಿದ್ದೇನೆ. ಮುಂಬರುವ ದಿನಗಳಲ್ಲಿ ನಾವು ರೈತರಿಗಾಗಿ ಹಾಗೂ ಕೃಷಿ ವಲಯಕ್ಕಾಗಿ ಇನ್ನಷ್ಟು ಕೆಲಸ ಮಾಡುವುದನ್ನು ಬಯಸಿದ್ದೇವೆ ಎಂದು ಹೇಳಿದ್ದಾರೆ.
ಮರಳಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ತುರ್ತು ಕಾರ್ಯಕ್ರಮಗಳಲ್ಲಿ ಸಂಪುಟ ಸಭೆ ಸೇರಿದೆ. ಸೋಮವಾರ ಸಂಜೆ, ನರೇಂದ್ರ ಮೋದಿ ಸಂಪುಟದ ಮೊದಲ ಸಭೆ ನಡೆಯಲಿದೆ. ನರೇಂದ್ರ ಮೋದಿ ಅವರು 71 ನೂತನ ಸಚಿವರ ಜತೆ ಭಾನುವಾರ ಪದಗ್ರಹಣ ಮಾಡಿದರು. ಹಿಂದಿನ ಸರ್ಕಾರದಲ್ಲಿದ್ದ 34 ಸಚಿವರನ್ನು ಮೋದಿ, ತಮ್ಮ 3,0 ಸರ್ಕಾರದಲ್ಲಿಯೂ ಉಳಿಸಿಕೊಂಡಿದ್ದಾರೆ. 19 ಜನ ಸಂಪುಟ ದರ್ಜೆ ಸಚಿವರಾಗಿದ್ದಾರೆ, ಉಳಿದವರು ರಾಜ್ಯ ಖಾತೆಗಳನ್ನು ಹೊಂದಿದ್ದಾರೆ.
