T20 World Cup 2024ರಲ್ಲಿ ಉಗಾಂಡ ತಂಡ ಸೋಲಿನಲ್ಲಿ ದಾಖಲೆ ಬರೆದಿದೆ.
ಟಿ20 ವಿಶ್ವಕಪ್ ನ 18ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಉಗಾಂಡ ಹೀನಾಯ ಸೋಲು ಕಂಡಿದೆ. ಉಗಾಂಡ ತಂಡ ಕೇವಲ 39 ರನ್ ಗಳಿಗೆ ಆಲೌಟ್ ಆಗುವ ಮೂಲಕ ಈ ಕೆಟ್ಟ ದಾಖಲೆ ಬರೆದಿದೆ. ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ರೋವ್ಮನ್ ಪೊವೆಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ವಿಂಡೀಸ್ ಪರ ಆರಂಭಿಕ ಆಟಗಾರ ಜಾನ್ಸನ್ ಚಾರ್ಲ್ಸ್ 44 ರನ್ ಬಾರಿಸಿ ಮಿಂಚಿದ್ದರು.
ನಿಕೋಲಸ್ ಪೂರನ್ 17 ಎಸೆತಗಳಲ್ಲಿ 22 ರನ್, ರೋವ್ಮನ್ ಪೊವೆಲ್ 23 ರನ್ ಗಳಿಸಿದ್ದರು. ಶೆರ್ಫೆನ್ ರುದರ್ಫೋರ್ಡ್ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಅಂತಿಮ ಓವರ್ಗಳ ವೇಳೆ ಕಣಕ್ಕಿಳಿದ ಆ್ಯಂಡ್ರೆ ರಸೆಲ್ 17 ಎಸೆತಗಳಲ್ಲಿ 30 ರನ್ ಗಳಿಸಿದರು. ಈ ಮೂಲಕ ತಂಡವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 173 ರನ್ ಗಳಿಸಿತು. ಸ್ಪರ್ಧಾತ್ಮಕ ಮೊತ್ತದ ಗುರಿ ಬೆನ್ನಟ್ಟಿದ ಉಗಾಂಡ ತಂಡವು ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. ಮೊದಲ ಓವರ್ನಲ್ಲೇ ರೋಜರ್ ಮುಕಾಸಾ (0) ವಿಕೆಟ್ ಕಬಳಿಸುವ ಮೂಲಕ ಸ್ಪಿನ್ನರ್ ಅಕೇಲ್ ಹೊಸೇನ್ ಶುಭಾರಂಭ ಮಾಡಿದ್ದರು.
ಆ ಬಳಿಕ ಅಲ್ಪೇಜ್ ರಂಜಾನಿ (6) ಹಾಗೂ ಕೆನ್ನೆತ್ ವೈಸ್ವಾ (1) ಔಟ್ ಆದರು. ಅಲಿ ಶಾ (3) ಹಾಗೂ ದಿನೇಶ್ ನಕ್ರಾಣಿ (0) ಒಟ್ ಆದರು. ಈ ಮೂಲಕ 4 ಓವರ್ ಗಳಲ್ಲಿ ಕೇವಲ 11 ರನ್ ಗಳಿಗೆ ಪ್ರಮುಖ 5 ವಿಕೆಟ್ ಉರುಳಿದ್ದವು. ಕೊನೆಗೆ ಉಗಾಂಡ ತಂಡ 12 ಓವರ್ ಗಳಲ್ಲಿ ಕೇವಲ 39 ರನ್ ಗಳಿಗೆ ಆಲೌಟ್ ಆಯಿತು. ವೆಸ್ಟ್ ಇಂಡೀಸ್ 134 ರನ್ಗಳ ಅಮೋಘ ಜಯ ಸಾಧಿಸಿತು.