ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಖಾಲಿ ಸೈಟು ಕಂಡರೆ ಸಾಕು ಯಾರದೋ ಜಾಗಕ್ಕೆ ಬೇಲಿ ಹಾಕಿ, ನಕಲಿ ದಾಖಲೆ ಸೃಷ್ಟಿಸಿ ಮತ್ತ್ಯಾರಿಗೋ ಮಾರಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೆ ಹಲವರು ಅಮಾಯಕರು ಬಲಿಯಾಗುತ್ತಲೇ ಇದ್ದಾರೆ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಎಸ್ಪಿ ಕಚೇರಿಯನ್ನೇ ಮಾರಾಟಕ್ಕೆ ಯತ್ನಿಸಲಾಗಿದೆ.
ಭೂಗಳ್ಳರು ಸೂಪರಿಡೆಂಟ್ ಆಪ್ ಪೊಲೀಸ್ ಕಚೇರಿಯ (Bengaluru Rural SP Office) ಆಸ್ತಿಯನ್ನೇ ನಕಲಿ ದಾಖಲೆ ಸೃಷ್ಟಿಸಿ ಮಾರಾಟಕ್ಕೆ ಯತ್ನಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ನೇಪಾಳ ರಾಜರ ಹೆಸರಿನಲ್ಲಿದೆಯಂತೆ. ಅದು ಸಿವಿಲ್ ಡಿಸ್ಪ್ಯೂಟ್ ಇದೆಯಂತೆ. ಇದರ ನಡುವೆ ಎಸ್ಪಿ ಕಚೇರಿಯ ಆಸ್ತಿ ದಾಖಲೆಗಳನ್ನು ನಕಲಿ ಮಾಡಿಕೊಂಡಿರುವ ಭೂಗಳ್ಳರು ಸದ್ದಿಲ್ಲದೇ ಎಸ್ಪಿ ಕಚೇರಿಯ ಆಸ್ತಿಯನ್ನು ಮಾರಾಟ ಮಾಡಲು ಯತ್ನಿಸಿದ್ದಾರೆ.
ಹನೀಫ್ ಎಂಬಾತ ಎಸ್ಪಿ ಕಚೇರಿಯ ಪೋಟೋಗಳು ಹಾಗೂ ವಿಡಿಯೋಗಳನ್ನು ತೆಗೆದು ಗ್ರಾಹಕರಿಗೆ ಮಾರಾಟ ಮಾಡಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಎಸ್ಪಿ ಕಚೇರಿ ಸಿಬ್ಬಂದಿ ಇನ್ಸ್ಪೆಕ್ಟರ್ ಸಂತೋಷ್ ಗೌಡ ಪ್ರಶ್ನಿಸಿದ್ದಾರೆ. ಈ ವೇಳೆ ಆರೋಪಿ ಈ ಜಾಗ ನಮ್ಮದು, ನನ್ನ ಹೆಸರಿಗೆ ಜಿಪಿಎ ಇದೆ ಎಂದು ಅವಾಜ್ ಹಾಕಿದ್ದಾನೆ. ಕೂಡಲೇ ಆತಂಕಕ್ಕೆ ಒಳಗಾದ ಸಿಬ್ಬಂದಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸದ್ಯ ಪೊಲೀಸರು ಹನೀಫ್ ಸೇರಿದಂತೆ ರಾಜಶೇಖರ್, ಮೊಹಮದ್ ನದೀಮ್, ಮೋಹನ್ ಶೆಟ್ಟಿ ಹಾಗೂ ಗಣಪತಿ ಎಂಬುವವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ.