ಬೆಂಗಳೂರು: ನಿಗಮದ ಹಣ ಅಕ್ರಮ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ (B Nagendra) ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಹಾಲಿ ಸಚಿವರಾಗಿದ್ದ ಪ್ರಭಾವಿ ನಾಯಕ ಶ್ರೀರಾಮುಲು ಅವರನ್ನೇ ಸೋಲಿಸಿ ಮಂತ್ರಿಯಾಗಿದ್ದ ನಾಗೇಂದ್ರ, ಒಂದೇ ವರ್ಷದಲ್ಲಿ ಸಚಿವ ಸ್ಥಾನ ಕಳೆದುಕೊಂಡಂತಾಗಿದೆ. ತಮ್ಮ ರಾಜಕೀಯ ಗುರುವಾಗಿದ್ದ ಶ್ರೀರಾಮುಲು ಅವರನ್ನೇ ಮಣಿಸಿ ನಾಗೇಂದ್ರ ಸಚಿವರಾಗಿದ್ದರು.
ಬಿ. ನಾಗೇಂದ್ರ ಮೂಲತಃ ಬಳ್ಳಾರಿ ಜಿಲ್ಲೆಯವರು. ಬಿ. ಕಾಂ ಪದವಿ ಪಡೆದು ಉದ್ಯಮದ ಕಡೆ ಆಸಕ್ತಿ ವಹಿಸಿ, ಗಣಿಗಾರಿಕೆ ಮಾಡಿದ್ದರು. ಆ ವೇಳೆ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಇವರ ನಡುವೆ ಸ್ನೇಹಾ ಬೆಳೆಯಿತು. ಉದ್ಯಮ ಬೆಳೆದಂತೆ ನಾಗೇಂದ್ರ ಕೂಡ ಬೆಳೆದರು. ನಂತರ 2008 ರಲ್ಲಿ ಜನಾರ್ದನ ಮತ್ತು ಶ್ರೀರಾಮುಲು ಸೇರಿ ಬಿಜೆಪಿಯಿಂದ ಕೂಡ್ಲಿಗಿ ಟಿಕೆಟ್ ಕೊಡಿಸಿ ಅವರನ್ನ ಗೆಲ್ಲಿಸಿದರು. ಅಲ್ಲಿಂದ ರಾಜಕೀಯ ಜೀವನ ಪ್ರಾರಂಭವಾಯಿತು.

2013 ರಲ್ಲಿ ಬಿಜೆಪಿ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಕೂಡ್ಲಿಗಿಯಿಂದ ಸ್ಪರ್ಧೆ ಮಾಡಿ ಆಗಲೂ ಗೆದ್ದರು. ಆನಂತರ ಗಣಿ ಕೇಸ್‌ಗಳ ಮೂಲಕ ಜೈಲುವಾಸ ಅನುಭವಿಸಿದರು. 2018 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. ಆ ವೇಳೆ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.
ನಂತರ 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲೂ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಬಿಜೆಪಿಯ ಶ್ರೀರಾಮುಲು ವಿರುದ್ಧ ಅಭೂತಪೂರ್ವ ಜಯ ಸಾಧಿಸಿದರು. ಹೀಗಾಗಿ ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ಯುವಜನ ಸೇವೆ ಮತ್ತು ಕ್ರೀಡೆ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಸಚಿವರಾಗಿದ್ದರು. ಈಗ ನಿಗಮದ ಅವ್ಯವಹಾರದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದಾರೆ.