ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ (SP) ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಉತ್ತರ ಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕನೌಜ್ ಲೋಕಸಭಾ ಚುನಾವಣೆಯಲ್ಲಿ(Lok Sabha Elections 2024) ಗೆದ್ದಿದ್ದಕ್ಕಾಗಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಶಿವಪಾಲ್ ಯಾದವ್ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾಗಿರುವ ಕಾರಣ ಉತ್ತರ ಪ್ರದೇಶದ ವಿಪಕ್ಷ ನಾಯಕರಾಗಿ ಅವರನ್ನು ಆಯ್ಕೆ ಮಾಡಬಹುದು ಎಂಬ ಚರ್ಚೆ ಶುರುವಾಗಿದೆ.
ಅಖಿಲೇಶ್ ಯಾದವ್ ಅವರು ಲೋಕಸಭಾ ಚುನಾವಣೆಯಲ್ಲಿ 6,42,292 ಮತಗಳಿಂದ ಗೆಲ್ಲುವ ಮೂಲಕ ಯಾದವ್ ಕುಟುಂಬದ ಭದ್ರಕೋಟೆಯಾದ ಕನೌಜ್ ಅನ್ನು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಬಿಜೆಪಿಯ ಹಾಲಿ ಸಂಸದ ಸುಬ್ರತ್ ಪಾಠಕ್ ರನ್ನು ಸೋಲಿಸಿದ್ದಾರೆ.
ಈ ಬಾರಿ ಅಖಿಲೇಶ್ ಯಾದವ್ ನೇತೃತ್ವದಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಉತ್ತರ ಪ್ರದೇಶದಲ್ಲಿ 37 ಸ್ಥಾನಗಳನ್ನು ಗೆದ್ದಿದೆ. ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಈಗ ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ದೆಹಲಿ ರಾಜಕೀಯದತ್ತ ಮುಖಮಾಡುವುದು ಖಚಿತವಾಗಿದೆ. ಉತ್ತರ ಪ್ರದೇಶದಲ್ಲಿ 37 ಲೋಕಸಭಾ ಸ್ಥಾನಗಳನ್ನು ಗೆದ್ದ ನಂತರ, ಸಮಾಜವಾದಿ ಪಕ್ಷವು ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಂತರ ದೇಶದ ಮೂರನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.