ಕೊಯಮತ್ತೂರು: ಕರುನಾಡಲ್ಲಿ ಸಿಂಗ ಎಂದೇ ಖ್ಯಾತಿಯಾಗಿದ್ದ ಕೆ. ಅಣ್ಣಾಮಲೈ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.
ಕೊಯಮತ್ತೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ ಅಣ್ಣಾಮಲೈ ಡಿಎಂಕೆಯ ಗಣಪತಿ ರಾಜ್‌ಕುಮಾರ್ ಪಿ ವಿರುದ್ಧ ಸೋಲು ಕಂಡಿದ್ದಾರೆ.
ಆರಂಭದ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ್ದ ಅಣ್ಣಾಮಲೈ ನಂತರದ ಸುತ್ತುಗಳಲ್ಲಿ ಎರಡನೇ ಸ್ಥಾನಕ್ಕೆ ಕುಸಿದರು. ಆನಂತರ ಮೇಲೆ ಏರುವ ಯಾವುದೇ ಪ್ರಯತ್ನ ಅವರಿಂದ ಆಗಲಿಲ್ಲ. ಪರಿಣಾಮವಾಗಿ 17 ಸಾವಿರ ಮತಗಳ ಅಂತರದಿಂದ ಸೋಲು ಕಂಡರು.
ತಮಿಳುನಾಡಿನಲ್ಲಿ ಬಿಜೆಪಿಗೆ ಭದ್ರ ನೆಲೆ ಇಲ್ಲ. ಆದರೆ, ಕಮಲ ಅರಳಿಸಲು ಅಣ್ಣಾಮಲೈ ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿಯೇ ಹಲವಾರು ರೋಡ್ ಶೋಗಳನ್ನು, ಪ್ರತಿಭಟನೆ ಸೇರಿದಂತೆ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಆದರೂ ಅಣ್ಣಾಮಲೈ ಪ್ರಯತ್ನ ಸಫಲವಾಗಲಿಲ್ಲ. ಸಿಪಿಐಎಂನ ಭದ್ರ ಕೋಟೆಯಾಗಿರುವ ಈ ಕ್ಷೇತ್ರದಲ್ಲಿ, ಬಿಜೆಪಿ ಕೂಡ ತನ್ನದೇ ಮತ ಬ್ಯಾಂಕ್ ಪಡೆದಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸಿಪಿಎಂ ನಾಯಕ ಪಿ. ಆರ್. ನಟರಾಜನ್ ಗೆದ್ದಿದ್ದರು. ಬಿಜೆಪಿಯ ಸಿ. ಪಿ. ರಾಧಾಕೃಷ್ಣನ್ ಎರಡನೇ ಸ್ಥಾನ ಪಡೆದಿದ್ದರು. ಆಗ ರಾಧಾಕೃಷ್ಣನ್ 4 ಲಕ್ಷದಷ್ಟು ಮತ ಪಡೆದಿದ್ದರು. ಹೀಗಾಗಿ ಅಣ್ಣಾಮಲೈ ಈ ಕ್ಷೇತ್ರದಿಂದ ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಹುಟ್ಟು ಹಬ್ಬದ ದಿನವೇ ಅಣ್ಣಾಮಲೈ ನಿರಾಸೆ ಅನುಭವಿಸಿದ್ದಾರೆ.