ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಮೋದಿಗೆ ಮೈತ್ರಿಯ ಇನ್ನಿತರ ಪಕ್ಷಗಳು ಕಂಟಕವಾಗಬಹುದು ಎಂಬ ಚರ್ಚೆ ಜೋರಾಗಿತ್ತು, ಇದರ ಮಧ್ಯೆಯೇ ನಾಯಕರು ಮಾತನಾಡಿದ್ದು, ಭರವಸೆ ಸಿಕ್ಕಂತಾಗಿದೆ.
ಆಗಾಗ ದೋಸ್ತಿ ಬದಲಿಸುವ ಕುಖ್ಯಾತಿಯನ್ನೇ ಬೆನ್ನಿಗೆ ಅಂಟಿಸಿಕೊಂಡಿರುವ ಟಿಡಿಪಿ ಹಾಗೂ ಜೆಡಿಯು ಪಕ್ಷಗಳು 30 ಸಂಸದರ ಬಲ ಹೊಂದಿವೆ. ಈಗಾಗಲೇ ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮೈತ್ರಿಯ ನಾಯಕರು ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ನಿಷ್ಠೆ ಬದಲಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿದ್ದವು.
ಆದರೆ, ಎರಡೂ ಪಕ್ಷಗಳು ಸ್ಪಷ್ಟನೆ ನೀಡಿದ್ದು, ಎನ್‌ಡಿಎ ಮೈತ್ರಿ ಕೂಟದಲ್ಲಿ ಮುಂದುವರೆಯುವ ಹಾಗೂ ಮೊದಿ ಸರ್ಕಾರಕ್ಕೆ ಬಲ ತುಂಬುವ ಪಣ ತೊಟ್ಟಿವೆ. ಜೆಡಿಯು ನಿಲುವನ್ನು ಸ್ಪಷ್ಟಪಡಿಸಿರುವ ಪಕ್ಷದ ವಕ್ತಾರ ಕೆ. ಸಿ. ತ್ಯಾಗಿ, ತಮ್ಮ ಪಕ್ಷ ಎನ್‌ಡಿಎ ಜೊತೆ ಸಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮತ ಎಣಿಕೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪರ್ಕಿಸಿದ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಎನ್‌ಡಿಎ ಮೈತ್ರಿ ಕೂಟ ಬಹುಮತ ಸಾಧಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿ ಶುಭಾಶಯ ಕೋರಿದರು. ಈ ಮೂಲಕ ಎನ್‌ಡಿಎ ಮೈತ್ರಿ ಕೂಟದಲ್ಲಿ ಎಲ್ಲವೂ ಸರಿಯಾಗಿದೆ ಅನ್ನೋ ಸಂದೇಶ ರವಾನೆ ಮಾಡಿದೆ. ಸದ್ಯದ ವಿದ್ಯಮಾನಗಳನ್ನು ಗಮನಿಸಿದರೆ, ಎನ್ ಡಿಎ ಮೈತ್ರಿಕೂಟಕ್ಕೆ ಯಾವುದೇ ಕಂಟಕ ಇಲ್ಲ. ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕರಿಸುವುದು ಖಚಿತವಾದಂತಾಗಿದೆ.