ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಅತೀ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮುವ ಸನಿಹದಲ್ಲಿದ್ದರೂ ಬಿಜೆಪಿ ಪಾಲಿಗೆ ಇದು ನುಂಗಲಾರದ ತುತ್ತಾಗಿಯೇ ಇದೆ. ಇಲ್ಲಿ ಬಿಜೆಪಿಗೆ ಗೆದ್ದರೂ ಸೋತಂತೆಯೇ ಅನುಭವವಾಗಿದೆ.
ಸದ್ಯ ಟ್ರೆಂಡ್ ನೋಡಿದರೆ, ಎನ್ ಡಿಎ ಮೈತ್ರಿಕೂಟ ಬಹುಮತದತ್ತ ಇದ್ದರೂ ಬಿಜೆಪಿಯ ಸಂಖ್ಯಾ ಬಲ ಸರಳ ಬಹುಮತದ ಸನಿಹಕ್ಕೆ ಬರುವಂತೆ ಕಾಣುತ್ತಿಲ್ಲ. ಇದು ಬಿಜೆಪಿಯ ಹಾದಿಗೆ ಸಂಕಷ್ಟ ತಂದೊಡ್ಡಿದೆ. ಸದ್ಯದ ಸಂಖ್ಯಾಬಲ ಗಮನಿಸಿದರೆ, ಎನ್‌ಡಿಎ ಮೈತ್ರಿ ಕೂಟ ಅಂದಾಜು 290 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಲ್ಲಿದೆ. ಈ ಪೈಕಿ ಬಿಜೆಪಿ 238 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ.
ಲೋಕಸಭೆಯಲ್ಲಿ ಬಹುಮತಕ್ಕೆ ಕನಿಷ್ಟ 272 ಸದಸ್ಯ ಬಲ ಬೇಕು. ಈ ಪೈಕಿ ಎನ್‌ಡಿಎ ಮೈತ್ರಿ ಕೂಟ 290 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಇದ್ದು, 3ನೇ ಅವಧಿಗೆ ಸರ್ಕಾರ ರಚಿಸುವ ಸಾಧ್ಯತೆ ದಟ್ಟವಾಗಿದೆ. ಆದರೆ, ಬಿಜೆಪಿ ಸಂಖ್ಯಾ ಬಲ ಕುಸಿದಿರುವ ಕಾರಣ, ಎನ್‌ಡಿಎ ಮೈತ್ರಿ ಕೂಟದ ಮಿತ್ರ ಪಕ್ಷಗಳು ಮೂಗುದಾರ ಹಾಕುವ ಸಾಧ್ಯತೆ ಹೆಚ್ಚಾಗಿಯೇ ಇವೆ.
ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟ 353 ಸ್ಥಾನಗಳಲ್ಲಿ ಗೆದ್ದಿತ್ತು. ಈ ವೇಳೆ ಬಿಜೆಪಿ ಪಕ್ಷವೊಂದೇ 303 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಹೀಗಾಗಿ ಬಿಜೆಪಿಯೇ ನಿರ್ಣಾಯಕ ಎನ್ನುವಂತಾಗಿತ್ತು. ಈಗ ಈ ರೀತಿಯ ವಾತಾವರಣ ಬಿಜೆಪಿಗೆ ಇಲ್ಲದಂತಾಗಿದೆ. ಇನ್ನು ನಿತೀಶ್ ಕುಮಾರ್ ಸಾರಥ್ಯದ ಜೆಡಿಯು ಹಾಗೂ ಟಿಡಿಪಿ ತಲಾ 15 ಸ್ಥಾನಗಳಲ್ಲಿ ಗೆಲುವು ಕಾಣಬಹುದು ಎನ್ನಲಾಗುತ್ತಿದೆ. ಇವೆರಡೂ ಪಕ್ಷಗಳು ಎನ್‌ಡಿಎ ಮೈತ್ರಿ ಕೂಟದಲ್ಲಿ ಕಿಂಗ್ ಮೇಕರ್ ಪಾತ್ರ ವಹಿಸಲಿವೆ.
ಜೆಡಿಯು, ಟಿಡಿಪಿ ಪಕ್ಷಗಳೆರಡೂ ತಮ್ಮ ನಿಷ್ಠೆ ಬದಲಿಸುವಲ್ಲಿ ಎತ್ತಿದ ಕೈ. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿಯೇ ಇದೆ. ಜೆಡಿಯು ನಾಯಕ ನಿತೀಶ್ ಕುಮಾರ್ ಅವರಂತೂ 2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎನ್‌ಡಿಎ ಮೈತ್ರಿ ಕೂಟಕ್ಕೆ ಹಾರಿದ್ದರು. ಅದಕ್ಕೆ ಮುನ್ನ ಇಂಡಿಯಾ ಮೈತ್ರಿ ಕೂಟಕ್ಕೆ ಉಗಮಕ್ಕೆ ಕಾರಣರಾಗಿದ್ದ ನಾಯಕರಲ್ಲಿ ಅವರು ಒಬ್ಬರಾಗಿದ್ದರು. ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಕೂಡಾ 2024ರ ಲೋಕಸಭಾ ಚುನಾವಣೆ ಹೊತ್ತಲ್ಲಿ ಎನ್‌ಡಿಎ ಮೈತ್ರಿ ಕೂಟಕ್ಕೆ ಮರಳಿದವರು. ಇದನ್ನೆಲ್ಲ ಗಮನಿಸಿದರೆ, ಮೋದಿ ಕೂಡ ಈ ಬಾರಿ ಕಿಂಗ್ ಮೇಕರ್ ಗಳ ಅಂಕುಶದಲ್ಲಿ ಆಡಳಿತ ನಡೆಸುವ ವಾತಾವರಣ ಎದುರಿಸಬೇಕಾಗುತ್ತದೆ.