ನವದೆಹಲಿ: ಲೋಕಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಎನ್‌ಡಿಎ ಮೈತ್ರಿ ಕೂಟ ಆರಂಭಿಕ ಮುನ್ನಡೆ ಸಾಧಿಸಿದೆ. ದೇಶದೆಲ್ಲೆಡೆ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಗೆ ಸಜ್ಜಾಗಿದ್ದಾರೆ.
ಗೆಲುವಿನ ವಿಶ್ವಾಸದಲ್ಲಿರುವ ಎನ್‌ಡಿಎ ಫಲಿತಾಂಶ ಪ್ರಕಟವಾಗುವ ಮುನ್ನವೇ ವಿಜಯೋತ್ಸವಕ್ಕೆ ಭರ್ಜರಿ ತಯಾರಿ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬೃಹತ್ ಔತಣ ಕೂಟಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ.
ಬಿಹಾರದ ಪಾಟ್ನಾದಲ್ಲಿ 400 ಕೆಜಿ ಲಡ್ಡು ಸಿದ್ಧಗೊಳಿಸಲಾಗುತ್ತಿದೆ. ಮುಂಬೈ, ಆಗ್ರಾ ಮತ್ತು ಭೋಪಾಲ್ ಸೇರಿದಂತೆ ಹಲವೆಡೆ ಬಿಜೆಪಿ ಕಾರ್ಯಕರ್ತರು ಲಡ್ಡು ತಯಾರಿಸಿದ್ದಾರೆ. ಬೆಂಗಳೂರಿನಲ್ಲಿ ಕೂಡ ಬಿಜೆಪಿ ಕಚೇರಿಯನ್ನು ವಿದ್ಯುತ್ ದೀಪಾಲಂಕಾರಗಳಿಂದ ಸಿಂಗರಿಸಲಾಗಿದ್ದು, ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ. ದೇಶಾದ್ಯಂತ ಎನ್‌ಡಿಎ 311 ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ್ದು, ಇಂಡಿಯಾ ಒಕ್ಕೂಟ 152 ಹಾಗೂ ಇತರೇ ಪಕ್ಷಗಳು 51 ಕ್ಷೇತ್ರಗಳಲ್ಲಿ ಆರಂಭಿಕ ಹಿನ್ನಡೆ ಅನುಭವಿಸಿವೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ರಾಯ್ ಬರೇಲಿ ಹಾಗೂ ವಯನಾಡ್ ಎರಡೂ ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ.