ಬೆಂಗಳೂರು: ಜೂನ್ ಆರಂಭದಿಂದಲೇ ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಇದರಿಂದಾಗಿ ಜನರು ಹೈರಾಣಾಗಿದ್ದಾರೆ. ರಸ್ತೆಗಳೆಲ್ಲ ನೀರು ತುಂಬಿ ದಾರಿ ಸಿಗದೆ ಹರಿಯುತ್ತಿದೆ. ಈ ಮಧ್ಯೆಯೇ ನಗರಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು ನಗರ ಹಾಗೂ ಗ್ರಾಮಾಂತರಕ್ಕೆ ಆರೆಂಜ್ ಅಲರ್ಟ್ (Orange Alert) ಘೋಷಿಸಲಾಗಿದೆ. ಜೂನ್. 2ರಂದು ಬೆಂಗಳೂರು ನಗರದಲ್ಲಿ ದಾಖಲೆಯ 69 ಮಿಲಿಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ನೈಋತ್ಯ ಮುಂಗಾರು ಪರಿಣಾಮ ಬೆಂಗಳೂರಲ್ಲಿ ಒಂದು ಗಂಟೆಗೂ ಅಧಿಕ ಕಾಲ ಮಳೆ ಸುರಿದಿದೆ. ಹೆಚ್ಎಎಲ್ ಏರ್ಪೋರ್ಟ್ 9.2 ಮಿಲಿಮೀಟರ್, ಎಲೆಕ್ಟ್ರಾನಿಕ್ ಸಿಟಿ 29 ಮಿ.ಮೀ., ಮಾದಾವರ 4.5 ಮಿ.ಮೀ ಸೋಂಪುರ(ಬೆಂಗಳೂರು ನಗರ) 5.5 ಮಿ.ಮೀ. ಮಳೆ ದಾಖಲಾಗಿದೆ.
ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ಶಿವಾಜಿನಗರ, ಜಯನಗರ, ಹೆಬ್ಬಾಳ, ಮಾಗಡಿ ರಸ್ತೆ, ಕೋರಮಂಗಲ, ಕೆ.ಆರ್.ಪುರಂ, ವಿಧಾನಸೌಧ ಸೇರಿದಂತೆ ಬಹುತೇಕ ಬೆಂಗಳೂರಿನಲ್ಲಿ ಮಳೆಯಾಗಿದೆ. ಮಳೆಯಿಂದಾಗಿ ರಸ್ತೆಗಳೆಲ್ಲ ಕೆರೆಗಳಂತಾಗಿವೆ. ಹೀಗಾಗಿ ವಾಹನ ಸವಾರರು ಪರದಾಟ ನಡೆಸಿದ್ದಾರೆ.
ಹಲವೆಡೆ ಜನ – ಜೀವನ ಅಸ್ತವ್ಯಸ್ಥಗೊಂಡಿದೆ. 118 ಮರಗಳು, 128 ಕೊಂಬೆಗಳು ಧರೆಗೆ ಉರುಳಿದ ಕುರಿತು ದೂರುಗಳು ಬಂದಿವೆ.