ಭಾರತೀಯ ಮಹಾಕಾವ್ಯ ವೈಜ್ಞಾನಿಕ ಕಾಲ್ಪನಿಕ ಸಾಹಸ ಚಲನಚಿತ್ರ ಹಾಗೂ ‘ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್’ ಪ್ರಭಾಸ್ ಅಭಿನಯದ ‘ಕಲ್ಕಿ 2898 AD’ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ಕುತೂಹಲ ಮೂಡಿಸಿದ್ದು, ಓಟಿಟಿಯಲ್ಲಿ ಬಿಡುಗಡೆಯಾಗಿದೆ.
ಯಾರು ಮಾಡಿರದ ವಿನೂತನ ಪ್ರಯೋಗಕ್ಕೆ ಈ ಚಿತ್ರತಂಡ ಮುಂದಾಗಿದೆ. ಪ್ರಭಾಸ್ ಈ ಚಿತ್ರದಲ್ಲಿ ಭೈರವನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಭೈರವನ ನಂಬಿಕಸ್ಥ ಗೆಳೆಯನಾಗಿ ಬುಜ್ಜಿ(ವಿಶೇಷ ಕಾರ್)ಪಾತ್ರವಿದೆ. ಈ ಎರಡು ಪಾತ್ರಗಳನಿಟ್ಟುಕೊಂಡು ಚಿತ್ರತಂಡ “B&B” ಎಂಬ ಹದಿನೈದು ಹದಿನೈದು ನಿಮಿಷಗಳ ಎರಡು ಅನಿಮೇಷನ್ ಸಿರೀಸ್ ಬಿಡುಗಡೆ ಮಾಡಿದೆ.
ಪ್ರಮುಖ ನಗರಗಳ ಚಿತ್ರಮಂದಿರಗಳಲ್ಲಿ ಈ ಅನಿಮೇಷನ್ ಸಿರೀಸ್ ಏಕಕಾಲಕ್ಕೆ ಬಿಡುಗಡೆಯಾಗಿದೆ. ಈ ಎರಡು ಭಾಗಗಳು ಮೇ 31 ರಿಂದ ಅಮೇಜಾನ್ ಪ್ರೈಮ್ ನಲ್ಲಿ ನೋಡಲು ಲಭ್ಯವಿದೆ. ಈ ಅನಿಮೇಷನ್ ಸೀರಿಸ್ ನಲ್ಲಿರುವ ಭೈರವ ಹಾಗೂ ಬುಜ್ಜಿಯ ಜುಗಲ್ ಬಂದಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದು ಚಿತ್ರದ ಪ್ರಚಾರಕಷ್ಟೇ ಮಾಡಿರುವ ಅನಿಮೇಷನ್ ಸಿರೀಸ್. ಚಿತ್ರದ ಕಥೆಯೆ ಬೇರೆ; ಇದೇ ಬೇರೆ ಎಂದು ನಿರ್ದೇಶಕ ನಾಗ್ ಅಶ್ವಿನ್ ತಿಳಿಸಿದ್ದಾರೆ.
ಕಳೆದ ಅರ್ಧ ಶತಕದಿಂದ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ‘ವೈಜಯಂತಿ ಮೂವೀಸ್’ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಿದ್ದು, ಹೆಸರಾಂತ ‘ಕೆ.ವಿ.ಎನ್ ಪ್ರೊಡಕ್ಷನ್ಸ್’ ಈ ಚಿತ್ರದ ವಿತರಣೆ ಮಾಡುತ್ತಿದೆ.
ಬೆಂಗಳೂರಿನಲ್ಲಿ ಕೂಡ “ಕಲ್ಕಿ 2898 AD” ಚಿತ್ರದ ಅನಿಮೇಷನ್ ಸಿರೀಸ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೆ.ವಿ.ಎನ್ ಪ್ರೊಡಕ್ಷನ್ ನ ಸುಪ್ರೀತ್ ಅವರು “ಈ ಅನಿಮೇಷನ್ ಸಿರೀಸ್ ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.