ಮೈಸೂರು: ಹುಲಿ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ನಡೆದಿದೆ.
ಮೇಕೆ ಮೇಯಿಸುತ್ತಿದ್ದ ಸಂದರ್ಭದಲ್ಲಿದ್ದಾಗ ಹುಲಿ (Tiger Attack) ದಾಳಿ ನಡೆಸಿದ್ದು, ಮಹಿಳೆ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯ ಮೈಸೂರಿನ (Mysuru) ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ.
ಹುಲಿ ದಾಳಿಗೆ ಎನ್.ಬೇಗೂರು ಸಮೀಪದ ಮಾಳದ ಹಾಡಿ ನಿವಾಸಿ ಚಿಕ್ಕಿ ಹೆಸರಿನ ರೈತ ಮಹಿಳೆ ಸಾವನ್ನಪ್ಪಿದ್ದಾರೆ. ಮೂರ್ಬಾಂದ್ ಬೆಟ್ಟದ ಸಮೀಪ ಘಟನೆ ನಡೆದಿದೆ. ಮೇಕೆ ಮೇಯಿಸುತ್ತಿದ್ದಾಗ ಹಠಾತ್ ಮಹಿಳೆ ಮೇಲೆ ಹುಲಿ ದಾಳಿ ನಡೆಸಿ ಕೊಂದಿದೆ. ಅಲ್ಲದೇ, ಮಹಿಳೆಯನ್ನು ಕೊಂದು ದೇಹವನ್ನು 200 ಮೀ ದೂರ ಕಾಡಿನೊಳಗೆ ಎಳೆದೊಯ್ದಿದೆ ಎನ್ನಲಾಗಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಎನ್.ಬೇಗೂರು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಮಹಿಳೆಯ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗಿದೆ. ಮಹಿಳೆ ಕಾಲು ಮಾತ್ರ ಸಿಕ್ಕಿದೆ ಎನ್ನಲಾಗಿದೆ. ಮಹಿಳೆಯ ದೇಹ ತಂಡು-ತುಂಡಾಗಿಸಿ ಕಾಡಿನೊಳಗೆ ಒಯ್ದಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ. ಅಂತರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.