ಬೆಳಗಾವಿ: ಇಲ್ಲಿಯ ಅಳ್ವಾನ್ ಗಲ್ಲಿಯಲ್ಲಿ (Alwan Galli, Belagavi) ಕ್ರಿಕೆಟ್ (Cricket) ಜಗಳ ವಿಕೋಪಕ್ಕೆ ತಿರುಗಿ ಎರಡು ಗುಂಪುಗಳ ಮದ್ಯೆ ಮಾರಾಮಾರಿ ನಡೆದಿರುವ ಘಟನೆ ನಡೆದಿದೆ.
ಗುರುವಾರ ಸಂಜೆಯ ವೇಳೆ ಕ್ರಿಕೆಟ್ ಆಟದ ವಿಚಾರವಾಗಿ ಜಗಳ ಆರಂಭವಾಗಿದೆ. ಆದರೆ, ಈ ಜಗಳ ಬಿಡಿಸಬೇಕಾದ ದೊಡ್ಡವರೇ ಪರಸ್ಪರ ಬಡಿದಾಡಿಕೊಂಡಿದ್ದಾರೆ. 2 ಗುಂಪಿನ ಯುವಕರು, ಮನೆಗಳ ಮೇಲೆ ಕಲ್ಲು ತೂರಿ ತಲ್ವಾರ್ ಝಳಿಪಿಸಿದ್ದಾರೆ. ಯುವಕರ ನಡುವಿನ ಗಲಾಟೆಯಲ್ಲಿ 8 ಮಂದಿಗೆ ಗಾಯಗಳಾಗಿವೆ. ಎರಡೂ ಕಡೆಯವರಿಗೆ ಗಾಯಗಳಾಗಿದ್ದು, ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಲಾಟೆಯಲ್ಲಿ ಓರ್ವ ಪೊಲೀಸ್ ಪೇದೆಗೂ ಗಾಯಗಳಾಗಿವೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ನಗರ ಪೊಲೀಸ್ ಆಯುಕ್ತ ಮಾರ್ಟಿನ್, ಘಟನೆ ಕುರಿತು ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ. ಅಲ್ಲದೇ, ಬೆಳಗಾವಿ ನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಬೆಳಗಾವಿ ನಗರ ಸೇರಿದಂತೆ ಹೊರ ಜಿಲ್ಲೆಯಿಂದ ಹೆಚ್ಚುವರಿ ಸಿಬ್ಬಂದಿ ಕರೆಯಿಸುತ್ತಿದ್ದೇವೆ. ಗಲಾಟೆಯಲ್ಲಿ ಎಂಟು ಜನರಿಗೆ ಗಾಯವಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಕ್ರಿಕೆಟ್ ವಿಚಾರಕ್ಕೆ ಗಲಾಟೆಯಾಗಿದ್ದು ಬಳಿಕ ದೊಡ್ಡದಾಗಿದೆ. ತಲ್ವಾರ್ ಝಳಪಿಸಿದವರ ಕುರಿತು ಮಾಹಿತಿ ಇದೆ. ಸ್ಥಳದಲ್ಲಿನ ಸಿಸಿಟಿವಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಆಯುಕ್ತರು ಹೇಳಿದ್ದಾರೆ.