ಹುಬ್ಬಳ್ಳಿ: ಸಿಲಿಕಾನ್ ಸಿಟಿಯಲ್ಲಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ (Rameshwaram Cafe Bomb Blast) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ನಗರದಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಸೇರಿದಂತೆ 11 ಪ್ರದೇಶಗಳಲ್ಲಿ ಎನ್ ಐಎ ಅಧಿಕಾರಿಗಳು ಮಂಗಳವಾರ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಹುಬ್ಬಳ್ಳಿಯ ಗೌಸಿಯಾ ಟೌನ್ ನಿವಾಸಿಯಾಗಿರುವ ಸಾಫ್ಟ್‌ವೇರ್ ಇಂಜಿನಿಯರ್ ಶೋಯೆಬ್ ಮಿರ್ಜಾ ಹಾಗೂ ಆತನ ಸಹೋದರ ಅಜೀಬ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೆಫೆ ಸ್ಫೋಟದ ಪ್ರಮುಖ ಆರೋಪಿಗಳಾದ ಅಬ್ದುಲ್ ಮತೀನ್ ತಾಹ ಹಾಗೂ ಮುಸಾವೀರ್ ಹುಸೇನ್ಗೆ ಹಣ ಸಹಾಯ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಶೋಯೆಬ್ ಮಿರ್ಜಾ ಹಾಗೂ ಆತನ ಸಹೋದರ ಅಜೀಬ್ ಹಣ ಸಹಾಯ ಮಾಡಿದ್ದ ಬಗ್ಗೆ ಕೆಲ ಡಿಜಿಟಲ್ ಸಾಕ್ಷ್ಯಗಳು ಎನ್ಐಎಗೆ ದೊರೆತಿವೆ. ಕೆಫೆ ಸ್ಫೋಟದ ನಂತರ ಆರೋಪಿ ಮುಸಾವೀರ್ ಹುಬ್ಬಳ್ಳಿಗೆ ಭೇಟಿ ನೀಡಿ, ಇಲ್ಲಿ ಹಣ ಪಡೆದು ಪಶ್ಚಿಮ ಬಂಗಾಳಕ್ಕೆ ತೆರಳಿರುವ ಅನುಮಾನ ವ್ಯಕ್ತವಾಗಿದೆ. ಈ ಎಲ್ಲ ಆಯಾಮಗಳಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.