ರಾಯಚೂರು: ನಾಲ್ಕು ವರ್ಷದ ಬಾಲಕಿಯೊಬ್ಬಳು ಬೀದಿ ನಾಯಿಗೆ ಬಲಿಯಾಗಿರುವ ಘಟನೆ ನಡೆದಿದೆ.
ಕಳೆದ 15 ದಿನಗಳ ಹಿಂದೆಯೇ ಬೀದಿ ನಾಯಿ ಬಾಲಕಿಗೆ ಕಚ್ಚಿತ್ತು. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಲಾವಣ್ಯ(4) ಸಾವನ್ನಪ್ಪಿದ್ದಾಳೆ.
ತಾಲೂಕಿನ ಕೊರವಿಹಾಳ ಗ್ರಾಮದಲ್ಲಿ ಕಳೆದ 15 ದಿನಗಳ ಹಿಂದೆ ಒಂದೇ ದಿನ ಏಳು ಮಕ್ಕಳಿಗೆ ಬೀದಿ ನಾಯಿ ಕಚ್ಚಿತ್ತು. ಮನೆ ಬಳಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಏಕಾಏಕಿ ನಾಯಿ ದಾಳಿ ಮಾಡಿತ್ತು. ಈ ದಾಳಿಯಲ್ಲಿ ಗಾಯಗೊಂಡಿರುವ ಬಾಲಕಿಯೇ ಸಾವನ್ನಪ್ಪಿದ್ದಾಳೆ.
ಲಾವಣ್ಯಳ ಕತ್ತಿನ ಹಿಂಭಾಗಕ್ಕೆ ಬೀದಿ ನಾಯಿ ಕ್ರೂರವಾಗಿ ಕಚ್ಚಿತ್ತು. ನಾಯಿ ದಾಳಿಯಿಂದ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಲಾವಣ್ಯಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ಬೀದಿ ನಾಯಿಗಳ ದಾಳಿಯಿಂದಾಗಿ ಇಷ್ಟೊಂದು ಅವಾಂತರ ಸೃಷ್ಟಿಯಾದರೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದಿದ್ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.