ದಾವಣಗೆರೆ: ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆಯನ್ನು ಮಾರಾಟ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಭದ್ರಾವತಿ ಮೂಲದ ರೋಜಿ ಲೀನಾ(43), ಮಲ್ಲಿಕಾರ್ಜುನ (47) ಹಾಗೂ ಲೋಕೇಶ (35) ವಿರುದ್ಧ ಎಫ್ಐಆರ್ ದಾಖಲಾಗಿದೆ.
ಜಿಲ್ಲೆಯ ಹೊನ್ನಾಳಿ ತಾಲೂಕಿನ ಗ್ರಾಮವೊಂದರ 30 ವರ್ಷದ ಮಹಿಳೆಯನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಒಂದು ಲಕ್ಷ ರೂ. ಗೆ ಮಾರಾಟ ಮಾಡಲಾಗಿದೆ ಎಂದು ಮಹಿಳೆಯ ಸಹೋದರ ದೂರು ನೀಡಿದ್ದಾರೆ.
ಮಹಿಳೆಗೆ ಕೆಲವು ವರ್ಷಗಳ ಹಿಂದೆಯೇ ಮದುವೆಯಾಗಿತ್ತು. ಆದರೆ, ಪತಿ ನಿಧನವಾಗಿದ್ದರು. ಮಹಿಳೆಗೆ ಓರ್ವ ಮಗನಿದ್ದಾನೆ. ಪತಿ ನಿಧನದ ನಂತರ ಈ ಮಹಿಳೆ ಕಲ್ಯಾಣ ಮಂಟಪದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಮೇ 12 ರಂದು ಶಿವಮೊಗ್ಗಕ್ಕೆ ಹೋಗುವುದಾಗಿ ಹೇಳಿ ಹೋದವರು ಮರಳಿ ಬಂದಿರಲಿಲ್ಲ. ಆನಂತರ ಸಹೋದರನಿಗೆ ಕರೆ ಮಾಡಿ ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಒಂದು ಲಕ್ಷಕ್ಕೆ ಸೊಲ್ಲಾಪುರದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದು ಒಂದು ಲಕ್ಷ ರೂಪಾಯಿ ಕೊಟ್ಟರೇ ಬಿಡುವುದಾಗಿ ಹೇಳುತ್ತಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ. ಕೂಡಲೇ ಸಹೋದರ ದೂರು ನೀಡಿದ್ದು, ರಕ್ಷಿಸುವಂತೆ ಮನವಿ ಮಾಡಿದ್ದಾರೆ.