ಐಪಿಎಲ್ ಕಾವು ಎಲ್ಲಾ ಕಡೆ ಹೆಚ್ಚಿಕೊಂಡಿದೆ. ಕ್ರಿಕೆಟ್ ಪ್ರಿಯರ ನೆಚ್ಚಿನ ಈ ‘ಐಪಿಎಲ್’ ಕ್ರೀಡಾಕೂಟವು, ಭರ್ಜರಿ ಮನರಂಜನೆಯ ಜೊತೆಗೆ, ಕೆಲವರ ಮನೆಯನ್ನೂ ಸಹ ಹಾಳುಗೆಡವುತ್ತಿದೆ. ನಡೆವ ಪ್ರತಿ ಪಂದ್ಯದಲ್ಲೂ ಬಾಜಿ ಕಟ್ಟುವ ಜನ, ಸೋಲು- ಗೆಲುವಿನ ಸರಪಣಿಯಲ್ಲಿ ಜೋತುಬೀಳುತ್ತಿದ್ದಾರೆ. ಹಣದ ಆಸೆಗೆ ಈ ಬೆಟ್ಟಿಂಗ್ ಭೂತದ ಹಿಂದೆ ಬಿದ್ದು, ನರಕ ಕೂಪದಲ್ಲಿ ಬಲಿಬೀಳುತ್ತಿದ್ದಾರೆ. ಸದ್ಯ ರಾಯಚೂರಿನ ಬಳಿ ಇದೇ ನರಕಕೂಪಕ್ಕೆ ಬಲಿಯಾದ ಪ್ರಕರಣ ಬೆಳಕಿಗೆ ಬಂದಿದೆ.
ಮುದಿಬಸವ(24) ಎಂಬ ಯುವಕ ಏಕಾ-ಏಕಿ ಹಣ ಮಾಡುವ ದುರಾಸೆಗ ಬಿದ್ದು, ಐಪಿಎಲ್ ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡು, ಸಾಲದ ಸುಳಿಗೆ ಸಿಕ್ಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ.ರಾಯಚೂರ ಜಿಲ್ಲೆಯ ಮಸ್ಕಿ ತಾಲೂಕು ಉದ್ಬಾಳ ಗ್ರಾಮದ ಮುದಿಬಸವ, ಇತ್ತೀಚೆಗೆ ಐಪಿಎಲ್ ಬಾಜಿಯಲ್ಲಿ ಸೋತು-ಸೋತು ಸಾಲದ ಸುಳಿಗೆ ಸಿಲುಕಿದ್ದ. ದಿನೇ-ದಿನೇ ಬೆಟ್ಟಿಂಗಿನಲ್ಲಿ ಸೋತು ಸಾಲ ಅತಿಯಾಗಿದೆ. ಭರಿಸಲಾಗದ ಸಾಲಕ್ಕೆ ಭಯಬಿದ್ದು ಯುವಕ ಆತ್ಮಹತ್ಯೆಯ ದಾರಿ ಕಂಡುಕೊಂಡಿದ್ದಾನೆ. ಬದುಕು ಮುಗಿಸಿಕೊಳ್ಳಲು ನಿರ್ಧರಿಸಿ, ಸಿಂಧನೂರಿನ ‘ಸಾಯಿ ರೆಸಿಡೆನ್ಸಿ’ ಲಾಡ್ಜ್’ನಲ್ಲಿ ಬಾಡಿಗೆ ರೂಮು ಪಡೆದು, ಅಲ್ಲಿಯೇ ನೇಣಿಗೆ ಕೊರಳೊಡ್ಡಿದ್ದಾನೆ.
ರೂಮು ಪಡೆದ ಯುವಕ ಬೆಳಿಗ್ಗೆ ಎಷ್ಟು ಹೊತ್ತಾದರೂ, ಆಚೆ ಬಾರದೆ ಇದ್ದಾಗ, ಲಾಡ್ಜಿನವರಿಗೆ ಅನುಮಾನ ಮೂಡಿದೆ. ಸಿಬ್ಬಂದಿಗಳು ಬಾಗಿಲು ತೆರೆದು ನೋಡಿದಾಗ ಮುದಿಬಸವ ರೂಮಿನ ಪ್ಯಾನಿಗೆ ನೇಣು ಹಾಕಿಕೊಂಡಿದ್ದ. ತಕ್ಷಣ ಎಚ್ಚೆತ್ತುಕೊಂಡ ಲಾಡ್ಜಿನವರು, ಸಿಂಧನೂರು ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದುರಾಸೆಗೆ ಬಲಿಬಿದ್ದು, ಏಕಾ-ಏಕಿ ಹಣ ಮಾಡಲು ಹೊರಟವರಲ್ಲಿ ಹೆಚ್ಚಿನವರು, ಈ ರೀತಿ ಸುಡುಗಾಡು ಪಾಲಾಗುತ್ತಾರೆ. ಏನೇ ಹೇಳಿ, ಎಲ್ಲವನ್ನೂ ಕಣ್ಣಾರೆ ಕಂಡರೂ, ಮತ್ತೆ ಮತ್ತೆ ಅದೇ ಕೂಪಕ್ಕೆ ಜನ ಬಲಿಯಾಗುತ್ತಿರುವುದು, ದುರಂತವೇ ಸರಿ. ಇನ್ನಾದರೂ, ಈ ದುರಾಸೆಗೆ ಬಲಿಯಾದವರ ದುರಂತ ಅಂತ್ಯ ಕಂಡು, ಜನ ಎಚ್ಚರಿಕೆಯಿಂದಿರಲಿ. ಈ ಬೆಟ್ಟಿಂಗ್ ದಂಧೆಯಿಂದ ದೂರವಿರಲಿ.