ದೇಶದಲ್ಲಿ ಲೋಕಸಭೆ ಚುನಾವಣೆ ಕಾವು ಜೋರಾಗಿದೆ. ಎಲ್ಲ ರಾಜ್ಯಗಳಲ್ಲಿಯೂ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಗೆಲುವಿಗಾಗಿ ತಂತ್ರ- ಪ್ರತಿತಂತ್ರ ಹೆಣೆಯುತ್ತಿವೆ. ಆದರೆ, ದೇಶಕ್ಕೆ ಮಾರಕವಾಗಿರುವ ಖಲಿಸ್ತಾನಿಯ ಪ್ರಭಾವ ಈ ಚುನಾವಣೆಯ ಮೇಲಾಗುತ್ತಿದ್ದು, ಆತಂಕಕ್ಕೆ ಕಾರಣವಾಗುತ್ತಿದೆ.

ಪಂಜಾಬ್ ನಲ್ಲಿ ಖಲಿಸ್ತಾನಿ ಪರ ನಾಯಕರು ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಒಂದು ವೇಳೆ ಖಲಿಸ್ತಾನಿ ನಾಯಕರಿಗೆ ಮನ್ನಣೆ ಸಿಕ್ಕರೆ ಅಥವಾ ರಾಜಕೀಯವಾಗಿ ಈ ಮನಸ್ಥಿತಿಯ ವ್ಯಕ್ತಿಗಳು ಬೆಳೆದರೆ ರಾಷ್ಟ್ರೀಯ ಭದ್ರತೆ ಮೇಲೆ ಪರಿಣಾಮ ಬೀರವುದಂತೂ ಸತ್ಯ. ಪಂಜಾಬ್ ನಲ್ಲಿ ಬಿಜೆಪಿ, ಕಾಂಗ್ರೆಸ್, ಶಿರೋಮಣಿ ಅಕಾಲಿದಳ (ಎಸ್‌ಎಡಿ), ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಗಳಂತಹ ಸಾಂಪ್ರದಾಯಿಕ ವಿರೋಧಿ ಪಕ್ಷಗಳು ಈಗಾಗಲೇ ಗೆಲುವಿಗಾಗಿ ಯತ್ನಿಸುತ್ತಿವೆ. ಇದರ ಮಧ್ಯೆ ಖಲಿಸ್ತಾನಿ ಪರ ಧೋರಣೆ ಹೊಂದಿರುವವರು ಸ್ಪರ್ಧಿಸುತ್ತಿರುವುದು ಕೂಡ ತೀವ್ರ ಆತಂಕಕ್ಕೆ ಕಾರಣವಾಗುತ್ತಿದೆ.

ಪಂಜಾಬ್ ನಲ್ಲಿ ಕೊನೆಯ ಹಂತದಲ್ಲಿ ಅಂದರೆ ಜೂನ್ 1ರಂದು ಮತದಾನ ನಡೆಯಲಿದೆ. ಈಗಾಗಲೇ ಖಲಿಸ್ತಾನಿ ಪರ ಅಭ್ಯರ್ಥಿಗಳು ಖಲಿಸ್ತಾನಿ ಪ್ರತ್ಯೇಕ ರಾಷ್ಟ್ರದ ಉದ್ಧೇಶ ಪ್ರಚುರಪಡಿಸುತ್ತ, ಪ್ರತ್ಯೇಕ ರಾಷ್ಟ್ರದ ಪರಿಕಲ್ಪನೆಯ ಬೀಜ ಬಿತ್ತುತ್ತಲೇ ಮತ ಯಾಚಿಸುತ್ತಿರುವುದು ಆಘಾತಕಾರಿಯ ಸಂಗತಿಯಾಗುತ್ತಿದೆ. ಸಿಮ್ರಂಜಿತ್ ಸಿಂಗ್ ಮಾನ್, ಸಂದೀಪ್ ಸಿಂಗ್, ಸರಬ್ಜಿತ್ ಸಿಂಗ್ ಖಾಲ್ಸಾ ಮತ್ತು ಅಮೃತಪಾಲ್ ಸಿಂಗ್ ರಂತಹ ಖಲಿಸ್ತಾನಿ ಚಳುವಳಿ ಬೆಂಬಲಿಗರು ಹಾಗೂ ಖಲಿಸ್ತಾನಿ ಭಯೋತ್ಪಾದಕರು ಈಗಾಗಲೇ ಸ್ಪರ್ಧಿಸಲು ಮುಂದಾಗಿದ್ದಾರೆ. ಇವರ ಸ್ಪರ್ಧೆ ಇಡೀ ದೇಶದ ಪ್ರಜೆಗಳ ಆತಂಕಕ್ಕೆ ಕಾರಣವಾಗುತ್ತಿದೆ.ಈ ಪೈಕಿ ಈಗಾಗಲೇ ಸಿಮ್ರಂಜಿತ್ ಸಿಂಗ್ ಮಾನ್ ಅಲ್ಲಿಯ ಸಂಗ್ರೂರ್ ಸಂಸದರಾಗಿದ್ದಾರೆ. ಮೂರು ಬಾರಿ ಈ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಸಿಮ್ರಂಜಿತ್ ಸಿಂಗ್ ಮಾನ್ ಶಿರೋಮಣಿ ಅಕಾಲಿದಳದ ಮುಖ್ಯಸ್ಥರು. ಖಲಿಸ್ತಾನಿ ಬೆಂಬಲಿಗರೆಂದೇ ಖ್ಯಾತರಾಗಿದ್ದಾರೆ. ಖಲಿಸ್ತಾನಿ ಹೋರಾಟ, ಹೋರಾಟಗಾರರಿಗೆ ಬೆಂಬಲ, ಖಲಿಸ್ತಾನಿ ಪ್ರತ್ಯೇಕ ರಾಷ್ಟ್ರದ ಬಗ್ಗೆ ಪ್ರಚಾರ ಮಾಡುತ್ತಿರುತ್ತಾರೆ. ಈ ಬಾರಿಯೂ ಅದೇ ಪಕ್ಷದಿಂದ ಸ್ಪರ್ಧಿಸಲು ಅಣಿಯಾಗಿದ್ದಾರೆ.

ಅಮೃತಪಾಲ್ ಸಿಂಗ್ ಖಲಿಸ್ತಾನಿ ಪ್ರಚಾರಕ. ಈತ ಸದ್ಯ ಆಸ್ಸಾಂನ ಜೈಲಿನಲ್ಲಿದ್ದಾನೆ. ಈ ವ್ಯಕ್ತಿ 2022 ರಲ್ಲಿ ಮತ್ತೊಬ್ಬ ಖಲಿಸ್ತಾನಿ ಪರ ನಾಯಕ ದೀಪ್ ಸಿಧು ಮರಣದ ನಂತರ ವಾರಿಸ್ ಪಂಜಾಬ್ ಡಿ ಸಂಘಟನೆಯ ಮುಖ್ಯಸ್ಥನಾದ. ಈ ವ್ಯಕ್ತಿಯನ್ನು ಖಲಿಸ್ತಾನಿ ಮೋಸ್ಟ್ ವಾಂಟೆಡ್ ಉಗ್ರ ಭಿಂದ್ರನ್‌ವಾಲೆ ಪಾರ್ಟ್ 2 ಎನ್ನಲಾಗುತ್ತಿದೆ. ಸದ್ಯ ಈತ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದಾನೆ. 80ರ ದಶಕದಲ್ಲಿ ಪಂಜಾಬ್‌ನಲ್ಲಿ ಖಲಿಸ್ತಾನಿ ಚಳವಳಿಯ ನೇತೃತ್ವ ವಹಿಸಿದ್ದ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಒಬ್ಬ ಖಲಿಸ್ತಾನಿ ಭಯೋತ್ಪಾದಕ. ಆತ ಬ್ಲೂ ಸ್ಟಾರ್ ನಲ್ಲಿ ಕೊಲೆಯಾಗಿದ್ದ.

ಈ ಘಟನೆಯ ನಂತರ ಪಂಜಾಬ್ ನಲ್ಲಿ ಖಲಿಸ್ತಾನಿ ಬಂಡಾಯ ದಮನವಾಗಿತ್ತು. ಆದರೆ, ಅಮೃತಪಾಲ್ ಸಿಂಗ್ ಇದಕ್ಕೆ ನೀರೆರೆದು ಪೋಷಿಸಲು ಆರಂಭಿಸಿದ. ಅಮೃತಪಾಲ್ ಸಿಂಗ್ ನ ಆಪ್ತ ಸಹಾಯಕ ಸಂದೀಪ್ ಸಿಂಗ್, ಶಿವಸೇನಾ ತಖಾಲಿಯ ನಾಯಕ ಸುಧೀರ್ ಸೂರಿ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾನೆ. 2022ರಲ್ಲಿ ಅಮೃತಸರದಲ್ಲಿ ಸೂರಿಯನ್ನು ಹಾಡಹಗಲೇ ಕೊಲೆ ಮಾಡಲಾಯಿತು. ಈ ಪ್ರಕರಣದಲ್ಲಿಯೇ ಸದ್ಯ ಸಂದೀಪ್ ಸಿಂಗ್ ಜೈಲು ಸೇರಿದ್ದು, ಅಲ್ಲಿಂದಲೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಸಿದ್ಧನಾಗಿದ್ದಾನೆ.

ರಬ್ಜಿತ್ ಸಿಂಗ್ ಖಾಲ್ಸಾ ಕೂಡ ಸ್ಪರ್ಧೆಗೆ ಮುಂದಾಗಿದ್ದು, ಈತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕೊಲೆಗಾರ ಬಿಯಾಂತ್ ಸಿಂಗ್ ನ ಮಗ. ಸರಬ್ಜಿತ್ ಹಿಂದೆ ಕೂಡ ಸ್ಪರ್ಧಿಸಿದ್ದ. ಸರಬ್ಜಿತ್ ಸಿಂಗ್ 2014 ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ಫತೇಘರ್ ಸಾಹಿಬ್ ಮತ್ತು ಬಟಿಂಡಾದಿಂದ ಸ್ಪರ್ಧಿಸಿ ಸೋಲು ಕಂಡಿದ್ದ. ಈತನ ಅಜ್ಜ ಸುಚ್ಚಾ ಸಿಂಗ್ ಮತ್ತು ತಾಯಿ ಬಿಮಲ್ ಕೌರ್ ಸಂಸದರಾಗಿದ್ದರು. ಈಗ ಸರಬ್ಜಿತ್ ಸಿಂಗ್ ಖಲಿಸ್ತಾನ್ ಹೋರಾಟದ ಮೂಲಕವೇ ಕಣಕ್ಕೆ ಇಳಿಯಲು ಮುಂದಾಗಿದ್ದಾನೆ. ಈತ ಈಗ ಫರೀದ್ ಕೋಟ್ ನ ಮೀಸಲು ಕ್ಷೇತ್ರದಿಂದ ಸ್ಪರ್ಧೆಗೆ ಅಣಿಯಾಗಿದ್ದಾನೆ.

ಚುನವಾಣೆಯಲ್ಲಿ ಖಾಲಿಸ್ತಾನಿ ಬೆಂಬಲಿಗರು ಸ್ಪರ್ಧಿಸಿದರೆ, ಖಲಿಸ್ತಾನ ಹೋರಾಟದ ಬಗ್ಗೆಯೇ ಮಾತನಾಡುತ್ತಾರೆ. ಇದು ದೇಶದ ಸಾರ್ವಭೌಮತೆಗೆ ಧಕ್ಕೆಯಾಗದೆ ಇರದು. ಉಗ್ರಗಾಮಿ ಸಿದ್ಧಾಂತವು ಮುಖ್ಯವಾಹನಿಗೆ ಬರಬಹುದು. ಖಾಲಿಸ್ತಾನದ ಬೇಡಿಕೆಗೆ ಮತ್ತಷ್ಟು ಧ್ವನಿಗಳು ಸೇರಬಹುದು. ಪ್ರತ್ಯೇಕತಾವಾದದ ಪ್ರತಿಪಾದನೆಯು ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ಬಹುದೊಡ್ಡ ಸವಾಲಾಗಿ ನಿಲ್ಲಬಹುದು. ಒಂದು ವೇಳೆ ಚುನಾವಣೆಯಲ್ಲಿ ಖಲಿಸ್ತಾನಿ ನಾಯಕರು ಗೆದ್ದರೆ, ಸಂಸತ್ ನಲ್ಲಿ ಕೂಡ ಖಲಿಸ್ತಾನ ಹೋರಾಟದ ಕೂಗು ಕೇಳಬಹುದು. ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡಬಹುದು.

ಹೀಗಾದರೆ, ಖಲಿಸ್ತಾನಿ-ಪರ ನಾಯಕರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕಾನೂನು ಜಾರಿ ಸಂಸ್ಥೆಗಳಿಗೆ ಸಮಸ್ಯೆ ತರಬಹುದು. ಹೋರಾಟವನ್ನು ತೀವ್ರಗೊಳಿಸಬಹುದು. ಈಗಾಗಲೇ ಖಲಿಸ್ತಾನಿ ಉಗ್ರರಿಂದ ಹಣ ಪಡೆದಿರುವ ಆರೋಪ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮೇಲಿದೆ. ಚುನಾವಣೆಯಲ್ಲಿಯೂ ಈ ನಾಯಕತ್ವಕ್ಕೆ ಹೆಚ್ಚಿನ ಮಾನ್ಯತೆ ಸಿಕ್ಕರೆ, ಉಗ್ರರ ಕೃತ್ಯ ರಾಜಕೀಯವಾಗಿಯೂ ಬೆಳೆಯುವುದರಲ್ಲಿ ಎರಡು ಮಾತಿಲ್ಲ.