ಮುಂಬೈ: ಪ್ರಸಿದ್ಧ ವಿಚಾರವಾದಿ, ಚಿಂತಕ ಡಾ. ನರೇಂದ್ರ ದಾಭೋಲ್ಕರ್ (Narendra Dabholkar) ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಪುಣೆಯ ವಿಶೇಷ ಯುಎಪಿಎ ನ್ಯಾಯಾಲಯ (Pune court) ಇಬ್ಬರು ಆರೋಪಿಗಳಿಗೆ ಈ ಶಿಕ್ಷೆ ವಿಧಿಸಿದ್ದು, ಮೂವರನ್ನು ಆರೋಪ ಮುಕ್ತಗೊಳಿಸಿದೆ. ಶೂಟರ್‌ಗಳಾದ ಶರದ್ ಕಲಾಸ್ಕರ್ ಮತ್ತು ಸಚಿನ್ ಅಂದುರೆ ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಪು ನೀಡಿದೆ. ವೀರೇಂದ್ರಸಿನ್ಹ ತಾವಡೆ, ಸಂಜೀವ್ ಪುನಾಲೇಕರ್ ಮತ್ತು ವಿಕ್ರಮ್ ಭಾವೆ ವಿರುದ್ಧ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಅವರನ್ನು ಮುಕ್ತಗೊಳಿಸಲಾಗಿದೆ.
2013 ರ ಆ.20 ರಂದು ನರೇಂದ್ರ ದಾಭೋಲ್ಕರ್ ವಾಯು ವಿಹಾರಕ್ಕೆ ತೆರಳಿದ್ದಾಗ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಐವರನ್ನು ಹೆಸರಿಸಲಾಗಿತ್ತು. ಅಧಿಕಾರಿಗಳು, ಮೂಢನಂಬಿಕೆ ವಿರುದ್ಧ ಅಭಿಯಾನ ನಡೆಸುತ್ತಿದ್ದ ಕಾರಣ ಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದರು. ಆನಂತರ ಈ ಪ್ರಕರಣದ ತನಿಖೆಯನ್ನು 2014ರಲ್ಲಿ ಸಿಬಿಐಗೆ ವಹಿಸಲಾಗಿತ್ತು. ಈ ಸಂದರ್ಭದಲ್ಲಿ ಹಿಂದೂ ಬಲಪಂಥೀಯ ಸನಾತನ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದ ಇಎನ್‍ಟಿ ಶಸ್ತ್ರಚಿಕಿತ್ಸಕ ಡಾ. ವೀರೇಂದ್ರಸಿನ್ಹ್ ತಾವಡೆ ಕೊಲೆಯ ಮಾಸ್ಟರ್ ಮೈಂಡ್ ಎಂಬ ಆರೋಪ ಕೇಳಿ ಬಂದಿತ್ತು.