ರಣ ಬಿಸಿಲು, ಬಿಸಿಗಾಳಿ ಇಡೀ ರಾಜ್ಯದ ಜನರನ್ನು ಹೈರಾಣಾಗಿಸಿದೆ. ಸದ್ಯ ಕಳೆದ 26ರಂದು ಮೊದಲ ಹಂತ ಮುಗಿಸಿ, 7ನೇ ತಾರೀಕಿಗೆ ಕೊನೆಯ ಹಂತದ ಮತದಾನಕ್ಕೆ ರಾಜ್ಯ ತಯಾರಾಗಿದೆ, ಈ ಹೊತ್ತಲ್ಲಿ ಬಿಸಿಲ ಕಾರಣಕ್ಕೆ ಸಂಜೆ ‘ಒಂದು ಗಂಟೆ ಹೊತ್ತು’ ಮತದಾನಕ್ಕೆ ಕಾಲಾವಕಾಶ ಹೆಚ್ಚಿಸುವಂತೆ ರಾಜ್ಯ ಬಿಜೆಪಿ ಮನವಿ ಮಾಡಿದೆ.
ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿರುವ ಭಾರತೀಯ ಜನತಾ ಪಕ್ಷ, “ಹೈದರಾಬಾದ್ ಕರ್ನಾಟಕ, ಬಾಂಬೆ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಮತದಾನ ನಡೆಯಲಿದ್ದು, ಅಲ್ಲಿ ಸುಡು ಬಿಸಿಲು ಜನರನ್ನು ಕಾಡುತ್ತಿದೆ. ಇಂತಹ ಹೊತ್ತಲ್ಲಿ ವಯಸ್ಸಾದವರು, ಅನಾರೋಗ್ಯ ಪೀಡಿತರು, ಬಿಸಿಲಲ್ಲಿ ಬಂದು ಮತದಾನ ಮಾಡುವುದು ಕಷ್ಟಕರವಾಗಿರಲಿದೆ. ಆದುದರಿಂದ, ಸಂಜೆ ಒಂದು ಗಂಟೆ ಅವಧಿ ಮತದಾನಕ್ಕೆ ಸಮಯಾವಕಾಶ ಹೆಚ್ಚಿಸಬೇಕೆಂದು” ಪತ್ರ ಬರೆದಿದೆ.