ಬೃಹತ್ ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್ ರೇವಣ್ಣ ಕೊನೆಗೂ ಊರಿಗಿಳಿವ ಸುಳಿವು ಸಿಕ್ಕಿದೆ. ಹಗರಣದ ತೀವೃತೆ ಹೆಚ್ಚಾಗುತ್ತಿದ್ದಂತೆಯೇ ಫಾರಿನ್ನಿಗೆ ಹಾರಿದ್ದ ಪ್ರಜ್ವಲ್, ಜರ್ಮನ್ ದೇಶದ “ಫ್ರಾಂಕ್ ಫರ್ಟ್” ಸೇರಿಕೊಂಡಿದ್ದರು. ಇದೀಗ ಲೈಂಗಿಕ ಕೇಸು ಸಂಬಂಧಿಸಿ ‘ವಿಶೇಷ ತನಿಖಾ ತಂಡ’ ಚುರುಕು ಮುಟ್ಟಿಸುತ್ತಿದ್ದಂತೆಯೇ ಅಲ್ಲಿಂದ ಬುಡ ಕೀಳುತ್ತಿರುವ ಸುದ್ದಿ ಸಿಕ್ಕಿದೆ.
ಹಗರಣ ಸಂಬಂಧಿಸಿ ತನಿಖೆ ಚುರುಕುಗೊಳಿಸಿರುವ ಎಸ್ಐಟಿ, ಸಂತ್ರಸ್ತರನ್ನು ಮತ್ತು ಸಂಬಂಧಿಸಿದವರನ್ನು ವಿಚಾರಣೆಗೊಳಪಡಿಸಿ, ಮಾಹಿತಿ ಕಲೆಹಾಕುತ್ತಿದೆ. ಈ ಹಿಂದೆ ಈ ಪ್ರಜ್ವಲ್ ಕಾರ್ ಡ್ರೈವರ್ ಆಗಿದ್ದ “ಕಾರ್ತಿಕ್” ಎಂಬಾತನಿಂದಲೂ ಮಾಹಿತಿ ಪಡೆಯಲಾಗಿದೆ. ಮೊದಲಿಗೆ ಈ ಹಗರಣದ ಪೆನ್ ಡ್ರೈವ್ ಈಚೆ ತರಿಸಿದ್ದೇ ಈತ ಎನ್ನಲಾಗುತ್ತಿದ್ದು, ವಿಚಾರಿಸಲಾಗುತ್ತಿದೆ. ಇನ್ನು ಸಚಿವ ಜಮೀರ್ ಆಹ್ಮದ್ ಆಪ್ತ ಎನ್ನಲಾದ ನವೀನ್ ಗೌಡ ಎಂಬಾತನ ಮೇಲೂ ಕಣ್ಣಿಡಲಾಗಿದೆ. ಹೊಳೆ ನರಸೀಪುರದ ಬಿಜೆಪಿ ಪರಾಜಿತ ಅಭ್ಯರ್ಥಿ ವಕೀಲ ದೇವರಾಜೇಗೌಡ ಅವರಿಗೂ ನೋಟೀಸ್ ನೀಡಲಾಗಿದೆ. ಹಾಗೆಯೇ, ಸಂತ್ರಸ್ತ ರಲ್ಲಿನ ಕೆಲವರ ಮೇಲೂ ಸಹ ಗುರುತರ ಆರೋಪಗಳಿದ್ದು, ಆ ಬಗ್ಗೆಯೂ ವಿಚಾರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಪ್ರಜ್ವಲ್ ರೇವಣ್ಣ ರಿಟರ್ನ ಟಿಕೆಟ್ ಹದಿನಾರನೆಯ ತಾರೀಖಿಗೆ ಮಾಡಿಸಿದ್ದು, ಮುಂಚಿತವಾಗಿಯೇ ಹಾಜರಾಗುವ ಸಂಭವವಿದೆ. ಲುಕ್ಔಟ್ ನೋಟೀಸ್ ಜಾರಿಯಾದರೇ, ಒಂದೇ ದಿನದಲ್ಲಿ ಹಾಜರಾಗುವ ಅನಿವಾರ್ಯತೆ ಸೃಷ್ಟಿಯಾಗಲಿದೆ. ಆ ಬಗ್ಗೆ ಕಾಲಾವಕಾಶ ಕೇಳಿ ಕಾಲಹರಣ ಮಾಡಲೂ ಪ್ರಯತ್ನಿಸಬಹುದು. ಹೊರಗಡೆ ಇದ್ದುಕೊಂಡೇ ಕೇಸಿಗೆ ಸಂಬಂಧಿಸಿ ಪ್ಲಾನ್ ರೂಪಿಸಿ ಗೆಲ್ಲುವ ಹುನ್ನಾರವಿರಬಹುದು.