ಆದಿತ್ಯ ಅಭಿನಯದ “ಕಾಂಗರೂ” ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಹೊತ್ತಲ್ಲಿ ಚಿತ್ರತಂಡ “ತಾಯಿಗೀತೆ”ಯೊಂದನ್ನು ಬಿಡುಗಡೆ ಮಾಡಿಕೊಂಡಿದೆ.
“ತಾಯಿಗಿಂತ ದೇವರು ಭೂಮಿ ಮೇಲೆ ಎಲ್ಲಿದೆ? ಅವಳ ಲಾಲಿ ಕೇಳದೆ ಬದುಕೆಲ್ಲಿದೆ?” ಎಂಬ ಅರ್ಥಗರ್ಭಿತ ಸಾಲುಗಳನ್ನು ಹಿರಿಯ ಚಿತ್ರ ಸಾಹಿತಿ ಕೆ. ಕಲ್ಯಾಣ್ ಬರೆದರೇ, ಸಾಧು ಕೋಕಿಲ ಅವರು ಸಂಗೀತ ಸಂಯೋಜಿಸಿ, ತಾವೇ ಧ್ವನಿಯಾಗಿದ್ದಾರೆ. ಹಾಡು ಸುಮಧುರವಾಗಿ ಮೂಡಿ ಬಂದಿದ್ದು, ತಣ್ತಾಣಗೆ ಮನಮುಟ್ಟುವಂತೆ. ತ್ಯಾಗಮಯಿ ತಾಯಿಗಾಗಿ ಸಮರ್ಪಿಸಿದ ಈ ಹಾಡು ‘ಹೀಟ್ ಲೀಸ್ಟ್’ ಸೇರುವ ಸೂಚನೆಕೊಡುತ್ತಿದೆ.
ಅರೋಹ ಪ್ರೊಡಕ್ಷನ್ನಿನಡಿಯಲ್ಲಿ ‘ಕಿಶೋರ್ ಮೇಗಳಮನೆ’ ನಿರ್ದೇಶನದ ಈ ಚಿತ್ರದಲ್ಲಿ ‘ಡೆಡ್ಲಿ’ ಖ್ಯಾತಿಯ ಆದಿತ್ಯ, ರಂಜನಿರಾಘವನ್,ಕರಿಸುಬ್ಬು, ನಾಗೇಂದ್ರ ಅರಸ್, ಅಶ್ವಿನ್ ಹಸನ್,ಶಿವಮಣಿ ಸ್ಪಂದನಾ ಪ್ರಸಾದ್,ಪ್ರಶಾಂತ್ ನಟನಾ ಸೇರಿದಂತೆ ಅನುಭವಿ ತಾರಾಗಣವೇ ತೆರೆ ಹಂಚಿಕೊಂಡಿದೆ.
ಚಿತ್ರವು ಕ್ರೈಂ ಥ್ರಿಲ್ಲರ್ ಕಥಾ ಹಂದರ ಹೊಂದಿದ್ದು, ಅದಿತ್ಯ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. “ಇದೊಂದು ವಿಭಿನ್ನ ಬಗೆಯ ಸಿನಿಮಾವಾಗಿದ್ದು, ಆರಂಭದಿಂದಲೂ ಮುಂದೇನು? ಏನಾಗಲಿದೆ? ಯಾರಿರಬಹುದು? ಎಂಬ ಕುತೂಹಲವನ್ನು ಕಟ್ಟಿಕೊಡುತ್ತಲೇ ಚಿತ್ರ ಮುಂದೆ ಸಾಗುತ್ತದೆ. ಮಗು ಕಳೆದುಕೊಂಡವರ ಆತಂಕ, ಆರ್ತನಾದದ ಎಳೆಯನ್ನು, “ಕಾಂಗರೂ” ಮೂಲಕ ಥ್ರಿಲ್ಲಿಂಗ್ ಆಗಿ ಹೇಳಹೊರಟಿದ್ದೇವೆ” ಎನ್ನುತ್ತಾರೆ ಆದಿತ್ಯ. ಚಿತ್ರ ಮೇ 10ಕ್ಕೆ ರಾಜ್ಯಾಧ್ಯಂತ ಬಿಡುಗಡೆ ಕಾಣಲಿದೆ.