ಬೆಂಗಳೂರು: ನನ್ನ ತಾಯಿ ದೇಶಕ್ಕಾಗಿ ಮಾಂಗಲ್ಯವನ್ನೇ ತ್ಯಾಗ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರ ಪ್ರಚಾರ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಪ್ರಚಾರದಲ್ಲಿ ಏನೇನೋ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾಂಗಲ್ಯ ಕಿತ್ತುಕೊಳ್ಳಲಿದ್ದಾರೆ ಅಂತಿದ್ದಾರೆ. ಆದರೆ, ನನ್ನ ತಾಯಿ ದೇಶಕ್ಕಾಗಿ ಮಾಂಗಲ್ಯವನ್ನೇ ತ್ಯಾಗಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಮಹಿಳೆಯರ ಮನಸಿನಲ್ಲಿರುವ ಸೇವಾಭಾವನೆ ಬಿಜೆಪಿಗೆ ಅರ್ಥವಾಗಲ್ಲ. ಪ್ರಧಾನಿ ಮೋದಿಗೆ ಮಾಂಗಲ್ಯದ ಬೆಲೆಯೇ ಗೊತ್ತಿಲ್ಲ. ಬಿಜೆಪಿ ಯಾವುದೇ ಅಭಿವೃದ್ಧಿ ಕಾರ್ಯದ ಬಗ್ಗೆ ಮಾತನಾಡಲ್ಲ. ಬಿಜೆಪಿಯವರು ನರೇಂದ್ರ ಮೋದಿ ಇಟ್ಟುಕೊಂಡು ಮತ ಕೇಳುತ್ತಿದ್ದಾರೆ. ಬಿಜೆಪಿ ಭಾವನಾತ್ಮಕ ವಿಚಾರ ಮುಂದಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರೈತರ ವಿರೋಧಿ ಕೃಷಿ ಕಾಯ್ದೆ ವಿರುದ್ಧ ವರ್ಷಾನುಗಟ್ಟಲೆ ಹೋರಾಟ ಮಾಡಿದ್ದಾರೆ. ದೆಹಲಿ ಗಡಿಯಲ್ಲಿ ಹೋರಾಟ ಮಾಡುತ್ತಿದ್ದ 609 ರೈತರು ಮೃತಪಟ್ಟರು. ಆಗ ಮೋದಿಗೆ ಮಾಂಗಲ್ಯ ನೆನಪಾಗಲಿಲ್ಲವಾ? ಮಣಿಪುರದಲ್ಲಿ ಹೆಣ್ಣನ್ನು ಬೆತ್ತಲೆಮಾಡಿ ಮೆರವಣಿಗೆ ಮಾಡಿದಾಗ ಬಾಯಿ ಬಿಡಲಿಲ್ಲ. ದೇಶದ ಬಗ್ಗೆ ಕಿಂಚಿಂತೂ ಕಾಳಜಿಯಿಲ್ಲದ ಮೋದಿಗೆ ನಾಚಿಕೆ ಆಗ್ಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.