ಬೆಂಗಳೂರು: ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕನ್ನಡ ಚಿತ್ರರಂಗದ ಹಲವರು ಈ ದುರ್ಘಟನೆಗೆ ಕಂಬನಿ ಮಿಡಿದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅದರಂತೆಯೇ ನಟ ದರ್ಶನ್ ಕೂಡ ಈ ಘಟನೆಗೆ ಬಗ್ಗೆ ಕೆಂಡಾಮಂಡಲವಾಗಿದ್ದಾರೆ.
ಹೌದು, ನಟ ದರ್ಶನ್ ತಮ್ಮ ಫೇಸ್ ಬುಕ್ ನಲ್ಲಿ, “ಜಸ್ಟೀಸ್ ಫಾರ್ ನೇಹಾ” ಅಭಿಯಾನಕ್ಕೆ ನಟ ಸಾಥ್ ನೀಡಿದ್ದಾರೆ. “ಪ್ರೀತಿಯ ಹೆಸರಲ್ಲಿ ಇಂತ ಅಮಾನುಷ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನೂ ಬಾಳಿ ಬದುಕಬೇಕಿದ್ದ 23 ವಯಸ್ಸಿನ ನೇಹಾ ಹಿರೇಮಠ್ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ಆ ದೇವರು ನೀಡಲಿ” ಎಂದು ಬರೆದು ಕಂಬನಿ ಮಿಡಿದಿದ್ದಾರೆ.
“ಈ ರೀತಿಯ ಅಮಾನುಷ ಘಟನೆ ಮತ್ತೆಂದೂ ಮರುಕಳಿಸದಿರಲಿ. ಮಗಳನ್ನು ಕಳೆದುಕೊಂಡ ಆ ತಂದೆ-ತಾಯಿಯ ಆಕ್ರಂದನ ನೋಡಲಾಗದು. ನಮ್ಮ ಸರ್ಕಾರ, ನ್ಯಾಯಾಂಗ ವ್ಯವಸ್ಥೆ, ಹಾಗೂ ಪೊಲೀಸರು ಆದಷ್ಟು ಬೇಗ ನೇಹಾ ಹಿರೇಮಠ್ ಸಾವಿಗೆ ನ್ಯಾಯ ದೊರಕುವಂತೆ ಮಾಡಲಿ ಎಂದು ನನ್ನ ಕಳಕಳಿ” ಎಂದು ನಟ ಶಿವರಾಜ್ ಕುಮಾರ್ ಬರೆದುಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.
ನೇಹಾ ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂಬುದಾಗಿ ನಟ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಬರೆದುಕೊಂಡಿದ್ದಾರೆ. ಒಳ್ಳೇ ಬುದ್ದಿ ಹೇಳಿಕೊಡುವ ವಿದ್ಯಾ ದೇಗುಲವೇ ಕಲುಷಿತವಾಯ್ತು. ಸಮಾಜದಲ್ಲಿ ಬಾಳಿ ಬದುಕಬೇಕಾದ ಒಂದು ಹೆಣ್ಣಿನ ಜೀವ ಮಣ್ಣಾಯ್ತು. ಇದಕ್ಕೆ ಉತ್ತರ ಒಂದೇ …. ” ನ್ಯಾಯ “, ಆ ಕಣ್ಣಿರಿಗೆ ಉತ್ತರ ” ನ್ಯಾಯ ” ಎಂದು ಆಂಕರ್ ಅನುಶ್ರೀ ಬೇಸರ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯ ಬಿವಿಬಿ ಕಾಲೇಜು ಕ್ಯಾಂಪಸ್ ಒಳಗೆ ಕಿರಾತಕ ಬಂದು, ವಿದ್ಯಾರ್ಥಿನಿ ನೇಹಾ ಹಿರೇಮಠ ಕಾಲೇಜಿನಿಂದ ಹೊರಬರುತ್ತಿದ್ದಂತೆ ಏಕಾಏಕಿ ಕುತ್ತಿಗೆ, ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ಮನಬಂದಂತೆ ಚಾಕುವಿನಿಂದ ಇರಿದು ಗಂಭೀರ ಗಾಯಗೊಳಿಸಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.