ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಕೂಡ ಆರ್ ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಆರ್ ಸಿಬಿ ಈಗ ಬೇಡದ ದಾಖಲೆಗೆ ಸಾಕ್ಷಿಯಾಗಿದೆ.
ಆರ್ ಸಿಬಿ ಇಲ್ಲಿಯವರೆಗೆ ಆಡಿರುವ 6 ಪಂದ್ಯಗಳಲ್ಲಿ ಐದರಲ್ಲಿ ಸೋತು, ಒಂದರಲ್ಲಿ ಮಾತ್ರ ಗೆಲುವು ಕಂಡಿದೆ. ಮುಂಬೈ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಈ ವೇಳೆ ಆರ್ ಸಿಬಿ ಬೇಡದ ದಾಖಲೆ ಬರೆದಿದೆ.
ಆರ್ ಸಿಬಿ ತಂಡ ನೀಡಿದ್ದ 197 ರನ್ ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 27 ಎಸೆತಗಳು ಬಾಕಿ ಇರುವಾಗಲೇ 7 ವಿಕೆಟ್ ಗಳಿಂದ ಗೆದ್ದಿದೆ. ಈ ಮೂಲಕ ಆರ್ ಸಿಬಿ 9ನೇ ಸ್ಥಾನಕ್ಕೆ ಕುಸಿದಿದೆ. ಅಲ್ಲದೇ, ಯಾವ ತಂಡವೂ ಮಾಡದ ಕಳಪೆ ದಾಖಲೆಗೆ ಸಾಕ್ಷಿಯಾಗಿದೆ.
ಆರ್ಸಿಬಿ ಬೃಹತ್ ಮೊತ್ತ ಕಲೆ ಹಾಕಿದ್ದರೂ ಮುಂಬೈ ವಿರುದ್ಧ ಏಕಪಕ್ಷೀಯವಾಗಿ ಸೋಲನುಭವಿಸಿತ್ತು. ಮೂವರು ಬ್ಯಾಟರ್ಗಳು ಸಿಡಿಲಬ್ಬರದ ಅರ್ಧಶತಕ ಸಿಡಿಸಿದರೂ ತಂಡಕ್ಕೆ 200 ರನ್ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಐಪಿಎಲ್ ಇತಿಹಾಸದಲ್ಲೇ ತಂಡದಿಂದ ಮೂರು ಅರ್ಧಶತಕಗಳು ಸಿಡಿದರೂ 200 ರನ್ ಪೂರೈಸದ ಮೊದಲ ತಂಡ ಎಂಬ ಬೇಡದ ದಾಖಲೆಯನ್ನು ಆರ್ ಸಿಬಿ ಮಾಡಿತು.
ಮುಂಬೈ ಐಪಿಎಲ್ ಇತಿಹಾಸದಲ್ಲಿ ಮೂರನೇ ಬಾರಿಗೆ 190 ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಅತಿ ಕಡಿಮೆ ಎಸೆತಗಳಲ್ಲಿ ಬೆನ್ನಟ್ಟಿದ (15.3 ಓವರ್) ದಾಖಲೆ ಬರೆಯಿತು. ಅದೂ ಆರ್ ಸಿಬಿ ವಿರುದ್ಧ. ನಾಯಕ ಫಾಫ್ ಡು ಪ್ಲೆಸಿಸ್, ರಜತ್ ಪಾಟಿದಾರ್ ಮತ್ತು ದಿನೇಶ್ ಕಾರ್ತಿಕ್ ಅರ್ಧಶತಕ ಮಾಡಿ 11ನೇ ಬಾರಿಗೆ ಮೊದಲು ಬ್ಯಾಟಿಂಗ್ ಮಾಡುವ ವೇಳೆ ಒಂದು ತಂಡದ ಮೂವರು ಆಟಗಾರರು ಅರ್ಧಶತಕದ ಇನ್ನಿಂಗ್ಸ್ ಆಡಿದ ದಾಖಲೆ ಮಾಡಿದ್ದಾರೆ.