ಬಳ್ಳಾರಿ: ದೇವರ ಮೂರ್ತಿ ಕೂರಿಸುವ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಜಗಳ ನಡೆದಿರುವ ಘಟನೆ ನಡೆದಿದೆ.
ಈ ಜಗಳ ತಾಲೂಕಿನ ಕೊಳಗಲ್ ಗ್ರಾಮದಲ್ಲಿ ನಡೆದಿದೆ. ಜಗಳ ವಿಕೋಪಕ್ಕೆ ತೆರಳಿ ಕಲ್ಲು ತೂರಾಟವಾಗಿದೆ. ಪವಾಡ ಪುರುಷ ಎರ್ರಿತಾತಾ ಸ್ವಾಮಿಯ ಮೂರ್ತಿ ಕೂರಿಸುವ ವಿಚಾರವಾಗಿಯೇ ಈ ಗಲಾಟೆ ನಡೆದಿದೆ. 15 ದಿನಗಳ ಹಿಂದೆ ಎರ್ರಿಸ್ವಾಮಿ ಮಠದಲ್ಲಿ ರಾತ್ರೋರಾತ್ರಿ ಮೂರ್ತಿ ಕೂರಿಸಲಾಗಿತ್ತು. ಇದನ್ನು ತೆರವು ಮಾಡುವಂತೆ ಮತ್ತೊಂದು ಸಮುದಾಯ ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಾಲಯ ಮೂರ್ತಿ ತೆರವುಗೊಳಿಸಲು ಆದೇಶ ನೀಡಿತ್ತು. ಆದರೂ ಮತ್ತೊಂದು ಸಮುದಾಯ ತೆರವುಗೊಳಿಸಿರಲಿಲ್ಲ. ಹೀಗಾಗಿ ಎರಡೂ ಸಮುದಾಯಗಳ ಮಧ್ಯೆ ವಾಗ್ವಾದ ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ತೆರಳಿದ್ದಾರೆ. ಈ ವೇಳೆ ಪೊಲೀಸರ ಮೇಲೆಯೂ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಪಿಎಸ್ ಐ ಸೇರಿದಂತೆ ಹಲವು ಅಧಿಕಾರಿಗಳು ಗಾಯಗೊಂಡಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಎಸ್ಪಿ ಮತ್ತು ಎಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎರಡೂ ಗುಂಪಿನ ಕಡೆಯಿಂದ 30ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆಯಲಾಗಿದೆ.