ಬೆಂಗಳೂರು: ರಾಜ್ಯಕ್ಕೆ ಬಿಸಿಲಿನ ಶಾಖ ಹೆಚ್ಚಾಗುತ್ತಿದ್ದು, ಜನರು ಕಂಗಾಲಾಗುತ್ತಿದ್ದಾರೆ. ರಣ ಬಿಸಿಲಿನ ಮಧ್ಯೆ ಜನರಿಗೆ ನೀರಿನ ಹಾಹಾಕಾರ ಕೂಡ ಉಂಟಾಗಿದೆ. ಇದರ ಮಧ್ಯೆ ಈಗ ಕಾಲರಾ ಆತಂಕ ಜನರನ್ನು ಕಾಡುತ್ತಿದೆ.
ರಾಜ್ಯದಲ್ಲಿ ಕಾಲಾರಾ ಪ್ರಕರಣಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಬೆಂಗಳೂರು ಒಂದರಲ್ಲಿಯೇ 9 ಪ್ರಕರಣಗಳು ದಾಖಲಾಗಿದ್ದು, ರಾಮನಗರದಲ್ಲಿ ಓರ್ವ ವ್ಯಕ್ತಿ ಕಾಲಾರಾ ರೋಗದಿಂದ ಬಳಲುತ್ತಿದ್ದಾರೆ. ಹೀಗಾಗಿ ಜನರಲ್ಲಿ ಆತಂಕ ಮನೆ ಮಾಡಿದೆ. ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಕಾಲರಾ ಇರುವುದು ಇತ್ತೀಚೆಗಷ್ಟೇ ತಿಳಿದು ಬಂದಿತ್ತು. ರಾಜ್ಯದಲ್ಲಿ ಭೀಕರ ಬರಗಾಲ ಇರುವ ಹಿನ್ನೆಲೆಯಲ್ಲಿ ಕಾಲಾರಾ ಆತಂಕ ಸಹಜವಾಗಿ ಕಾಡುತ್ತಿದೆ.
ಬೆಂಗಳೂರಿನ ಹೋಟೆಲ್ ಮಾಲೀಕರ ಸಂಘ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಗೆ ಪತ್ರ ಬರೆದಿದ್ದು, 30 ಸಾವಿರ ಬೀದಿ ಬದಿ ಹೋಟೆಲ್ ಇದ್ದು, ಅವುಗಳಿಂದ ಜನರ ಆರೋಗ್ಯ ಹದಗೆಡುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರಿನಲ್ಲಿ 3 ಕೇಸ್ಗಳು ಪತ್ತೆಯಾಗಿರುವ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಹೀಗಾಗಿ ಜನರು ಕೂಡ ಶುದ್ಧ ನೀರು ಕುಡಿಯಬೇಕು. ಶುದ್ಧ ಹಾಗೂ ಶುಚಿ ಊಟ ಮಾಡಬೇಕು ಎಂದು ವೈದ್ಯರು ಸೂಚಿಸಿದ್ದಾರೆ.