ರಾಜಸ್ಥಾನ್ ತಂಡ ಟೂರ್ನಿಯಲ್ಲಿ ತಾನಾಡಿದ ನಾಲ್ಕೂ ಪಂದ್ಯಗಳಲ್ಲಿ ಗೆಲುವು ಸಾಧಿಸುವುದರ ಮೂಲಕ ಟಾಪ್ ನಲ್ಲಿದೆ. ಆರ್ ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡ ಕೊನೆಯ ಓವರ್ ನಲ್ಲಿ 6 ವಿಕೆಟ್ ಗಳ ಜಯ ಸಾಧಿಸಿದೆ. ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ 113 ರನ್ ಗಳಿಸಿದ್ದರು.
ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಮೊದಲ ಓವರ್ ನ ಮೂರನೇ ಎಸೆತದಲ್ಲಿ ಶೂನ್ಯಕ್ಕೆ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡಿತು. ಆರಂಭದಲ್ಲಿ ಆರ್ ಆರ್ ತೀವ್ರ ಒತ್ತಡಕ್ಕೆ ಸಿಲುಕಿತ್ತು. ಆದರೆ, ಸಂಜು ಸ್ಯಾಮ್ಸನ್ ಹಾಗೂ ಜಾಸ್ ಬಟ್ಲರ್ ಆರ್ ಸಿಬಿ ಬೌಲರ್ ಗಳ ಮೇಲೆ ಸವಾರಿ ಮಾಡಿ ಗೆಲುವಿನ ದಡ ಸೇರುವಂತೆ ಮಾಡಿದರು.
ಪವರ್ ಪ್ಲೇಯ ಮೊದಲ ಐದು ಓವರ್ಗಳಲ್ಲಿ ಆರ್ಸಿಬಿ ವೇಗಿಗಳು ರಾಜಸ್ಥಾನ್ ಬ್ಯಾಟರ್ಗಳನ್ನು ಕಟ್ಟಿಹಾಕಿದ್ದರು. ಆದರೆ 6ನೇ ಓವರ್ಲ್ಲಿ ಮಯಾಂಕ್ ದಾಗರ್ ಬೌಲ್ ಮಾಡಿದ ಓವರ್ ಪಂದ್ಯದ ಗತಿ ಬದಲಿಸಿತು. ಈ ಓವರ್ ನಲ್ಲಿ ಬರೋಬ್ಬರಿ 20 ರನ್ ಗಳು ಹರಿದು ಬಂದಿದ್ದವು. ಅಲ್ಲಿಂದ ಇಬ್ಬರೂ ಆಟಗಾರರು ಸವಾರಿ ಮಾಡಲು ಆರಂಭಿಸಿದರು.
ಜಾಸ್ ಬಟ್ಲರ್ ಇಲ್ಲಿಯವರೆಗಿನ ಮೂರು ಪಂದ್ಯಗಳಲ್ಲಿ ಅಷ್ಟಾಗಿ ಮಿಂಚಿರಲಿಲ್ಲ. ಆದರೆ, ಈ ಪಂದ್ಯದ ಮೂಲಕ ಫಾರ್ಮ್ ಗೆ ಮರಳಿದರು. ಅಲ್ಲದೇ, ಈ ಪಂದ್ಯದಲ್ಲಿ ಅಜೇಯರಾಗಿ ಉಳಿದಿದ್ದಾರೆ. ಕೊನೆಯ ಓವರ್ ನ ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಶತಕ ಪೂರ್ಣಗಳಿಸುವುದರ ಮೂಲಕ ತಂಡಕ್ಕೆ ಜಯ ಕೂಡ ತಂದುಕೊಟ್ಟರು. ಬಟ್ಲರ್ 58 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ ಅಜೇಯ 100 ರನ್ ಗಳಿಸಿದರು. ಸಂಜು ಸ್ಯಾಮ್ಸನ್ ಕೂಡ ಈ ಪಂದ್ಯದಲ್ಲಿ 42 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 69 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.