ಬೆಂಗಳೂರು: ಖಾಸಗಿ ಕಂಪನಿ ಉದ್ಯೋಗಿ ಮೇಲೆ ನಡು ರಸ್ತೆಯಲ್ಲಿಯೇ ಹಲ್ಲೆ ಮಾಡಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಹೊರ ವರ್ತುಲ ರಸ್ತೆಯ ಕಲ್ಯಾಣ್ ನಗರ ಹತ್ತಿರ ನಡೆದಿದೆ. ಸುರೇಶ್ ಹಲ್ಲೆಗೊಳಗಾದ ವ್ಯಕ್ತಿ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಇಬ್ಬರು ಹಲ್ಲೆಗೊಳಗಾದ ವ್ಯಕ್ತಿಯ ಸಹೋದ್ಯೋಗಿಗಳು ಎನ್ನಲಾಗಿದೆ. ಕೆಲಸದ ಸಂದರ್ಭದಲ್ಲಿ ಹೆಚ್ಚು ಕೆಲಸ ಹಾಗೂ ಒತ್ತಡ ನೀಡಿದ್ದಕ್ಕೆ ಗೂಂಡಾಗಳಿಗೆ ಸುಪಾರಿ ಕೊಟ್ಟು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಉಮಾಶಂಕರ್, ವಿನೇಶ್, ಸಂದೀಪ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಸುರೇಶ್ ಹೆರಿಟೇಜ್ ಮಿಲ್ಕ್ ಪ್ರಾಡಕ್ಟ್ ಕಂಪನಿಯಲ್ಲಿ ಆಡಿಟರ್ ಆಗಿ ಕೆಲಸ ಮಾಡುತ್ತಿದ್ದರು. ಉಮಾಶಂಕರ್ ಮತ್ತು ವಿನೇಶ್ ಕೂಡ ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಹೆಚ್ಚಿನ ಕೆಲಸ ಮತ್ತು ತ್ವರಿತವಾಗಿ ಕೆಲಸ ಮುಗಿಸುವಂತೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಸುಪಾರಿ ಕೊಟ್ಟು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.