ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಏ. 2ರಂದು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿ ಮತ ಬೇಟೆ ನಡೆಸಲಿದ್ದಾರೆ.
ರಾಜ್ಯದ ವಿವಿಧ ಲೋಕಸಭಾ ಕ್ಷೇತ್ರಗಳಲ್ಲಿ ನಡೆಯುವ ಬೃಹತ್ ಸಮಾವೇಶಗಳಲ್ಲಿ ಕೂಡ ಅಂದು ಅಮಿತ್ ಶಾ ಭಾಗವಹಿಸಲಿದ್ದಾರೆ. ಏಪ್ರಿಲ್ 2ರಂದು ಬೆಳಗ್ಗೆ 9 ಗಂಟೆಗೆ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 11ಕ್ಕೆ ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಸಮಾವೇಶದಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಧ್ಯಾಹ್ನ 2ಕ್ಕೆ 4 ಲೋಕಸಭಾ ಕ್ಷೇತ್ರಗಳ ಪ್ರಮುಖರ ಜೊತೆ ಸಭೆ ನಡೆಸಲಿದ್ದಾರೆ. ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಕ್ಷೇತ್ರದ ಪ್ರಮುಖರ ಜೊತೆ ಸಭೆ ನಡೆಸಲಿದ್ದಾರೆ. ಆನಂತರ ಚೆನ್ನಪಟ್ಟಣಕ್ಕೆ ತೆರಳಲಿರುವ ಅವರು, ಸಂಜೆ 6ಕ್ಕೆ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಪರ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಆನಂತರ ಅಲ್ಲಿಯೇ ನಡೆಯಲಿರುವ ಸಮಾವೇಶದಲ್ಲಿ ಮಾತನಾಡಲಿದ್ದಾರೆ.
ರಾಜ್ಯಕ್ಕೆ ಬಂದರೂ ಈಶ್ವರಪ್ಪ ಅವರೊಂದಿಗೆ ಸಂಧಾನ ಮಾತುಕತೆ ನಡೆಸದಿರಲು ಅಮಿತ್ ಶಾ ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.