ಹನ್ನೆರಡನೇ ಶತಮಾನದ ಶರಣ ಗಣ್ಯರ ನಡುವೆ, ತನ್ನ ಸರ್ವ ಸಂಘ ಪರಿತ್ಯಾಗ ಹಾಗೂ ಅಗಾಧವಾದ ಜ್ಞಾನದ ಮೂಲಕವೇ ಉನ್ನತ ಸ್ಥಾನಕ್ಕೇರಿದ ಶರಣೆ “ಅಕ್ಕಮಹಾದೇವಿ”. ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆ ಎಂಬಲ್ಲಿನ “ಉಡುತಡಿ” ಎಂಬ ಪುಟ್ಟ ಊರಲ್ಲಿ ಶಿವಭಕ್ತ ದಂಪತಿಗಳಿಗೆ ಜನಿಸಿದವಳು ಈ ಮಹಾದೇವಿ. ಬಾಲ್ಯದಿಂದಲೂ ಆಕೆ ಮಹಾದೇವನಲ್ಲೇ ಅನುರಕ್ತಳಾಗಿ ಭಕ್ತಿ ಪರವಶಳಾದವಳು. “ದೇವರ ದೇವ ಶ್ರೀ ‘ಚೆನ್ನಮಲ್ಲಿಕಾರ್ಜುನ’ನ್ನೇ ನಾನು ಪತಿಯಾಗಿ ಸ್ವೀಕರಿಸುವೆ” ಎಂಬ ಹಠಕ್ಕೆ ಬಿದ್ದವಳು ಈ ಬಾಲೆ ಮಹಾದೇವಿ. ಪ್ರಾಯಕ್ಕೆ ಬಂದಾಗಲೂ ಈಕೆಯ ನಿರ್ಧಾರ ಬದಲಾಗಲಿಲ್ಲ. ಮಾನವರಾರನ್ನೂ ನಾನು ಪತಿಯಾಗಿ ಸ್ವೀಕರಿಸುವುದಿಲ್ಲ ಎಂಬ ಮಾತಿಗೆ ಆಗಲೂ ಕಟೀಬದ್ಧಳಾಗೇ ಇದ್ದಳು. ನೋಡುಗ,ಕೇಳುಗರಿಗೆ ಈ ಆಲೋಚನೆ ಪರಮಾವಧಿ ಅನಿಸಿದರೂ, ಮಹಾದೇವಿ ತನ್ನೊಳಗಿನ ಶಕ್ತಿ ಬಲ್ಲವಳಾಗಿಯೋ ಏನೋ, ದೃಢ ಚಿತ್ತದಿಂದಲೇ ನಿರ್ಧರಿಸಿದಂತಿದ್ದಳು.
ಅರಸರ ಕಾಲವಾದ್ದರಿಂದ, ಆಗಿನ್ನೂ ಪ್ರಾಯದಲ್ಲಿ ಪಳ-ಪಳಿಸುತ್ತಾ, ಅರಳಿ ಆಕರ್ಷಿಸುವ ಹೂವಿನಂತೆ ಮನಸೋರೆಗೊಳ್ಳುವಂತೆ ಬೆಳೆದು ನಿಂತ ಮಹಾದೇವಿಯು, ಸಹಜವಾಗಿಯೇ ರಾಜ “ಕೌಶಿಕ”ರ ಕಣ್ಣಿಗೆ ಬೀಳುತ್ತಾಳೆ. ಈಕೆಯ ರೂಪ ರಾಶಿಗೆ ಆಕರ್ಷಿತರಾಗುವ ಕೌಶಿಕ ರಾಜ ತಾನು ಮಹಾದೇವಿಯನ್ನು ಪತ್ನಿಯಾಗಿಸಿಕೊಳ್ಳುವ ಮಾತಾಡುತ್ತಾನೆ. ಇತ್ತ ಚೆನ್ನಮಲ್ಲಿಕಾರ್ಜುನ (ಹರ)ನನ್ನೇ ವರಿಸುವೆನೆಂದು ಪರಿತಪಿಸುತ್ತಾ ಕುಳಿತ ಮಹಾದೇವಿ, ತಾನು ರಾಜರ ಆಯ್ಕೆಯನ್ನು ತಿರಸ್ಕರಿಸುತ್ತಾಳೆ. ಆಗಿನ ಕಾಲಕ್ಕೆ ಅದು ದ್ರೋಹದಂತೆಯೇ ಪರಿಗಣಿಸುವ ರಾಜರ ಆಡಳಿತ. ಈಕೆಯ ತಿಸ್ಕಾರಕ್ಕೆ ರಾಜ ಕೌಶಿಕ ತಿರುಗಿಬೀಳುತ್ತಾನೆ. ಮಹಾದೇವಿಯ ಮನೆ ಮಂದಿಗೆಲ್ಲಾ ಕಿರುಕುಳ ಕೊಡಲಾರಂಭಿಸುತ್ತಾನೆ. ದಿನೇ ದಿನೇ ರಾಜನ ಕಿರುಕುಳ ಅತಿಯಾಗುತ್ತಾ ಹೋಗಿ ಮನೆಯವರು ನಲುಗುತ್ತಾರೆ. “ತನ್ನಿಂದ ಮನೆಯವರೆಲ್ಲಾ ಶಿಕ್ಷೆ ಅನುಭವಿಸುವಂತಾಗಬಾರದು” ಎಂಬ ಆಲೋಚನೆಯಲ್ಲಿ ರಾಜನನ್ನು ಮದುವೆಯಾಗಲು ಒಲ್ಲದ ಮನಸ್ಸಲ್ಲಿಯೇ ಒಪ್ಪುತ್ತಾಳೆ ಮಹಾದೇವಿ. ಆದರೆ, ಅದಕ್ಕೊಂದಷ್ಟು ನಿಬಂಧನೆ ಹಾಕಿ, ತಪ್ಪಿ ನಡೆದರೆ ಅಥವ ನಿಬಂಧನೆ ಮೀರಿ ನಿಂತರೆ, ಅಂದಿಗೆ ಸಂಸಾರ ಬಂಧನದಿಂದ ಮುಕ್ತಿ ಪಡೆಯುವುದಾಗಿ ತಿಳಿಸುತ್ತಾಳೆ. ಕೊನೆಗೆ ಈ ಒಪ್ಪಂದದೊಂದಿಗೆ ಶಿವ ಭಕ್ತನಲ್ಲದ ರಾಜ ಕೌಶಿಕನನ್ನು “ವಿಧಿ ಲಿಖಿತ” ಎನ್ನುತ್ತಾ ಮದುವೆಯಾಗುತ್ತಾಳೆ.
ಮೊದ-ಮೊದಲು ಸರಿಯಿರುವ ರಾಜ, ದಿನ ಕಳೆದಂತೆ ಮಹಾದೇವಿಗೆ ತಾನು ಕೊಟ್ಟ ಮಾತು ಮರೆತು ನಿಬಂಧನೆ ಮೀರಿ ವರ್ತಿಸುತ್ತಾನೆ. ಮೊದಲೇ ಮಾತು ಕೊಟ್ಟಂತೆ ಮಹಾದೇವಿ ರಾಜನ ನಡೆಯಿಂದ ಬೇಸತ್ತು, ಆ ಊರನ್ನೇ ಬಿಟ್ಟು ಹೊರಟು ನಿಲ್ಲುತ್ತಾಳೆ. ಅಲ್ಲಿಂದ ತನ್ನಿಚ್ಚೆಯಂತೆ ಬದುಕಲು ಬಯಸಿದ ಮಹಾದೇವಿ “ಕಲ್ಯಾಣ ಪಟ್ಟಣ”ಕ್ಕೆ ಬಂದು ನೆಲೆಯಾಗುತ್ತಾಳೆ. ಆಕೆ ಬಯಸಿದಂತೆಯೇ ಆ ಊರಲ್ಲಿ “ಶಿವಾನುಭವ ಮಂಟಪ” ಕಂಡ ಮಹಾದೇವಿಗೆ ಆನಂದವೋ ಆನಂದ. ಶಿವನಲ್ಲಿ ಅನುರಕ್ತಳಾಗಿ ಬದುಕು ಸೆವೆಸಲು ಇದುವೇ ಸೂಕ್ತ ಸ್ಥಳ ಎಂದು ಪರಿಭಾವಿಸಿ, ಆ “ಅನುಭವ ಮಂಟಪ” ಸೇರಿಕೊಳ್ಳುತ್ತಾಳೆ. ಅಲ್ಲಿ ಮಹಾಜ್ಞಾನಿಗಳಾದ ಜಗಜ್ಯೋತಿ ಬಸವಣ್ಣ, ಅಲ್ಲಮ ಪ್ರಭುಗಳು, ಚೆನ್ನ ಬಸವಣ್ಣನವರು, ಸಿದ್ಧರಾಮನವರು, ಸೇರಿ ಶಿವಭಕ್ತ ಗಣವೇ ತುಂಬಿಕೊಂಡಿತ್ತು. ಅನುಭವ ಮಂಟಪ ಸೇರಿದ ಹೊಸತರಲ್ಲಿ, ವಯಸ್ಸಿನಲ್ಲಿ ಕಿರಿಯಳಾದ ಮಹಾದೇವಿಯನ್ನು ಶಿವ ಶರಣರು ಹಲವು ವಿಧಗಳಲ್ಲಿ ಪರೀಕ್ಷಿಸಿದರು. ಆದರೆ, ಅಂತರಾತ್ಮದಿಂದಲೇ ಪರಿಶುದ್ಧಳಾಗಿದ್ದ ಆಕೆ ಎಲ್ಲರ ಹುಬ್ಬೇರುವಂತೆ ಪರೀಕ್ಷೆಗೆ ಒಡ್ಡಿಕೊಂಡು ಗೆದ್ದು ಬಂದಳು. ಶ್ರೇಷ್ಠ ಶಿವ ಶರಣ “ಬಸವಣ್ಣ” ರನ್ನು ತನ್ನ ಗುರುವನ್ನಾಗಿ ಸ್ವೀಕರಿಸುವ ಮಹಾದೇವಿ, ಅಲ್ಲಿ ನೆರೆಯುತ್ತಿದ್ದ ಮಹಾನ್ ಜ್ಞಾನಿಗಳ, ಭಕ್ತ ಮಹಾಶಯರ ಜೊತೆ ಭಕ್ತಿಯ ಪರಾಕಾಷ್ಠೆ ತಲುಪಿದಳು. ಆಧ್ಯಾತ್ಮದ ಅತ್ಯುನ್ನತಿ ಪಡೆವ ಮಹಾದೇವಿ ಚೆನ್ನಮಲ್ಲಿಕಾರ್ಜು (ಶಿವ)ನ ಕೂಡಿಕೊಳ್ಳಲು ತನ್ನ ಬದುಕಿನ ಸಾರ್ಥಕತೆ ಪಡೆಯಲು, ಶ್ರೀಶೈಲದ ಕಡೆ ಹೊರಟು ನಿಂತಳು. ಮಹಾದೇವಿಯಾಗಿ ಅನುಭವ ಮಂಟಪ ಸೇರಿದ್ದವಳು, ಶ್ರೀ ಶೈಲಕ್ಕೆ ಹೊರಟು ನಿಲ್ಲುವ ಹೊತ್ತಿಗೆ “ಅಕ್ಕ ಮಹಾದೇವಿ” ಎಂದು ಕರೆಸಿಕೋಳೊಳ್ಳುವಷ್ಟು ಭಕ್ತಿಧಾರೆ, ಜ್ಞಾನ ಸುಧೆ ಹರಿಸಿದ್ದಳು ಈಕೆ. ಸಾಲಿಗ್ರಾಮ ಶಿಲೆಯಂತೆ ಸೆವೆಸಿದ ಬದಕು ಮುಗಿಸಿಕೊಂಡು, ಮಹಾದೇವ ಚನ್ನಮಲ್ಲಿಕಾರ್ಜುನನಲ್ಲಿ ಲೀನಳಾಗಲು ಹೊರಟು ನಿಂತಳು. ಕಾಡು-ಮೇಡು ಅಲೆಯುತ್ತಾ ಶಿವೈಕ್ಯಕ್ಕೆ ದಾರಿ ಕಂಡಳು. ಕೊನೆಗೆ ಆಕೆ ಬಯಸಿದಂತೆಯೇ ಚನ್ನಮಲ್ಲಿಕಾರ್ಜುನನ ಜೊತೆ ಲೀನಳಾಗ ಬಯಸಿ ಇಹಲೋಕ ತ್ಯೇಜಿದಳು.
ಈ ದೇಶ ಕಂಡ ಮೊದಲ ವಚನಗಾರ್ತಿಯಾಗಿ ಅಕ್ಕ ಮಹಾದೇವಿ ಎಂದೆಂದಿಗೂ ಅಜರಾಮರ. ಅನುಭವ ಮಂಟಪದಲ್ಲಿದ್ದ ಮಹಾನ್ ಭಕ್ತಿ ಭಂಡಾರಿಗಳಿಂದಲೇ “ಅಕ್ಕ” ಎಂದು ಕರೆಸಿಕೊಂಡವಳು, ಅಂದುಕೊಂಡಂತೆಯೇ ಬದುಕಿ ನಡೆದವಳು, ಅದೇ ಹಾದಿಯಲ್ಲೇ ಮುಕ್ತಿ ಪಡೆದವಳು ಈ “ಅಕ್ಕ ಮಹಾದೇವಿ”. “ತನುವಿನೊಳಗಿದ್ದು, ತನುವ ಗೆದ್ದಳು. ಮನದೊಳಗಿದ್ದು, ಮನವ ಗೆದ್ದಳು. ವಿಷಯದೊಳಗಿದ್ದು, ವಿಷಯಂಗಳ ಗೆದ್ದಳು. ಅಂಗ ಸಂಗವ ತೊರೆದು ಭವವ ಗೆದ್ದಳು” ಎಂದು ಅನುಭವ ಮಂಟಪದ ಜ್ಞಾನಿ ಚನ್ನಬಸವಣ್ಣನವರು ಹೇಳಿದ್ದು ಈಕೆಯ ಕಟೀಬದ್ಧ ಬದುಕಿಗೆ ಕನ್ನಡಿ ಹಿಡಿದಂತಿದೆ.

