ಒಂದು ಹಗಲು ಕಳೆದು ರಾತ್ರಿಯಾಗುವ ಮತ್ತು ರಾತ್ರಿ ಕಳೆದು ಹಗಲಾಗುವ, ಸಂಧಿ ಕಾಲಕ್ಕೆ ‘ಸಂಧ್ಯಾ’ ಎಂದು ಕರೆಯಲಾಗುತ್ತೆ. ಅದರಲ್ಲೂ ಬೇರೆ ಬೇರೆ ಸಂಧ್ಯಾಗಳಿದ್ದು ಮೊದಲನೆಯದ್ದು ‘ಪ್ರಾತ:ಸಂಧ್ಯಾ’, ಎರಡನೆಯದ್ದು ‘ಸಾಯಂಸಂಧ್ಯಾ’, ಈ ಎರಡೂ ಸಂಧಿ ಕಾಲಗಳಲ್ಲಿ ಮಾಡುವ ವಂದನೆಗಳಿಗೆ (ಸೂರ್ಯೋಪಾಸನೆ) ಸಂಧ್ಯಾ ವಂದನೆ ಎಂದು ಕರೆಯುತ್ತಾರೆ. ಹಾಗೆಯೇ, ಸೂರ್ಯ ದೇವನು ನಡು ನೆತ್ತಿಯ ಮೇಲೆ ಬಂದಾಗ ಮಾಡುವ ‘ಮಾಧ್ಯಾಹ್ನಿಕ’ ಎಂಬ ಕರ್ಮವೂ(ಕಾರ್ಯ) ಇದೆಯಾದರೂ, ರೂಢಿಯಲ್ಲಿರುವುದು. ಪ್ರಾತ:ಸಂಧ್ಯಾ ಹಾಗೂ ಸಾಯಂಸಂಧ್ಯಾ ವಂದನೆಗಳು ಮಾತ್ರ. ಉಪನಯನ ಸಂಸ್ಕಾರ ನೆರವೇರಿಸಿಕೊಂಡ ವಟುಗಳು, ಗೃಹಸ್ಥರು, ದಿನಕ್ಕೆರಡು ಬಾರಿ ಮಾಡಲೇಬೇಕಾದ ಪವಿತ್ರ ಕರ್ತವ್ಯವಿದು ಎಂಬುದು ಜನಿವಾರ ಧರಿಸಿದವರ ಸಂಪ್ರದಾಯವಾಗಿದೆ.
ಈ ಸಂಧ್ಯಾವಂದನೆಯ ಕ್ರಮದಲ್ಲಿ ಊರು,ಜಾತಿ,ವರ್ಗ,ಸಂಪ್ರದಾಯಗಳ ಪ್ರಕಾರ ವ್ಯೆತ್ಯಾಸ ಕಂಡು ಬರುತ್ತದೆಯಾದರೂ, ಸರ್ವೇ-ಸಾಮಾನ್ಯವಾಗಿ ಎಲ್ಲರೂ ಆಚರಿಸುವ ಆರು ವಿಧಾನ ಅಥವಾ ಅಂಗಗಳಿವೆ. ಆಚಮನ, ಪ್ರಾಣಾಯಾಮ, ಮಾರ್ಜನೆ, ಅರ್ಘ್ಯ ಪ್ರದಾನ, ಗಾಯತ್ರೀಜಪ ಹಾಗೂ ಸೂರ್ಯೋಪಸ್ಥಾನ, ಇವೇ ಆ ಆರು ವಿಧಿಗಳು. ಇವುಗಳನ್ನು ಆಚರಿಸುವ ಅಂದರೇ, ಸಂಧ್ಯಾವಂದನೆ ಮಾಡುವ ಮೊದಲು, ಸ್ನಾನ ಮಾಡಿ (ಮಡಿಯಲ್ಲಿ), ತಮ್ಮ-ಸಂಪ್ರದಾಯ ಆಚರಣೆಗೆ ತಕ್ಕಂತೆ ವಿಭೂತಿ (ಶೈವರು) ಅಥವಾ ಊರ್ಧ್ವ ಪುಂಡ್ರ (ವೈಶ್ಣವರು) ವನ್ನು ಧಾರಣೆ ಮಾಡಿ ಆಸನದಲ್ಲಿ ಕುಳಿತು ನೆರವೇರಿಸಬೇಕು.
