ಸೆಲೆಬ್ರಿಟಿಯಾಗಿದ್ದರೂ ಸಾಕಷ್ಟು ವಿವಾದಗಳು ಇವರ ಸುತ್ತ ಹೆಣೆದುಕೊಂಡಿವೆ. ಹೀಗಾಗಿಯೇ ಇವರನ್ನು ಮಹಾ ಗಟ್ಟಿಗಿತ್ತಿ ಅಂತಾನೇ ಹಲವರು ಕರೆಯೋದು. ಈ ಗಟ್ಟಿಗಿತ್ತಿಯನ್ನು ಹಲವರು ಟಾರ್ಗೆಟ್ ಮಾಡಿ ಹಣಿಯಲು ಎಷ್ಟೇ ಯತ್ನಿಸಿದರೂ ಇವರು ಮಾತ್ರ ಪುಟಿದೆದ್ದು ನಿಲ್ತಾನೇ ಇರ್ತಾರೆ. ಅದಕ್ಕೆ ಪೂರಕವಾಗಿ ಈಗ ಚುನಾವಣೆಗೆ ಸ್ಪರ್ಧಿಸ್ತಿದ್ದಾರೆ ಬಾಲಿವುಡ್ ಬೆಡಗಿ ಕಂಗನಾ ರಾಣಾವತ್!
ಹಿಮಾಚಲ ಪ್ರದೇಶದ ಕಾಂಗ್ರೆಸ್ ನ ಭದ್ರಕೋಟೆಯಾಗಿರುವ ಮಂಡಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಘೋಷಣೆಯಾಗ್ತಿದ್ದಂತೆಯೇ ಕಾಂಟ್ರೊವರರ್ಸಿಯೂ ಈಕೆಯನ್ನು ಹಿಂಬಾಲಿಸಿಕೊಂಡು ಬಂದುಬಿಟ್ಟಿದೆ. ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರಿನೇಟ್ ಇನ್ಸ್ಟಾಗ್ರಾಮ್ನಲ್ಲಿ ಕಂಗನಾ ರಣಾವತ್ ಅವರ ಹಾಟ್ ಫೋಟೊ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ…..ಎಂದು ಪ್ರಶ್ನೆ ಹಾಕುವ ಮೂಲಕ ಹೆಣ್ಣು ಕುಲಕ್ಕೇ ಅವಮಾನ ಮಾಡಿದ್ದಾರೆ. ಜನಾಕ್ರೋಶ ನಂತರ ಆ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಚ್ಎಸ್ ಅಹಿರ್, ನಟಿ ಕಂಗನಾ ರಣಾವತ್ ಬಗ್ಗೆ ಅಸಭ್ಯ ಟೀಕೆ ಮಾಡಿದ್ದಾರೆ.
ಟೀಕಿಸುವ ಮೂಲಕ ಕೀಳುಮಟ್ಟದ ಮನಸ್ಥಿತಿ ಪ್ರದರ್ಶಿಸಿದ್ದಾರೆ. ಈ ಟೀಕೆಗಳಿಗೆ ಕಂಗನಾರಾಣಾವತ್ ತೀಕ್ಷ್ಣವಾಗಿಯೇ ಉತ್ತರಿಸಿದ್ದಾರೆ.
“ಸುಪ್ರಿಯಾ ಜೀ… ಕಲಾವಿದೆಯಾಗಿ ಕಳೆದ 20 ವರ್ಷಗಳ ನನ್ನ ವೃತ್ತಿಜೀವನದಲ್ಲಿ ನಾನು ಎಲ್ಲಾ ರೀತಿಯ ಮಹಿಳೆ ಪಾತ್ರ ನಿರ್ವಹಿಸಿದ್ದೇನೆ. ನಾವೆಲ್ಲ ಪೂರ್ವಾಗ್ರಹಗಳ ಸಂಕೋಲೆಯಿಂದ ನಮ್ಮ ಹೆಣ್ಣುಮಕ್ಕಳನ್ನು ಮುಕ್ತಗೊಳಿಸಬೇಕು, ಅವರ ದೇಹದ ಅಂಗಗಳ ಬಗ್ಗೆ ಕುತೂಹಲ ಬಿಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ನಾವು ಲೈಂಗಿಕ ಕಾರ್ಯಕರ್ತರನ್ನು ನಿಂದನೆ ಅಥವಾ ನಿಂದೆಯಾಗಿ ಬಳಸುವುದನ್ನು ತಡೆಯಬೇಕು. ಪ್ರತಿಯೊಬ್ಬ ಮಹಿಳೆಯೂ ಅವಳ ಘನತೆಗೆ ಅರ್ಹಳು”. ಎಂದು ಶಾಲಾ ಸುತ್ತಿಕೊಂಡು ಹೊಡೆವಂತೆ ಉತ್ತರಿಸಿದ್ದಾರೆ.
ಹಾಗೆ ನೋಡಿದರೇ, ಈ ಕಂಗನಾ ವಿರುದ್ಧ ಕಾಂಟ್ರವರ್ಸಿ ಈಗಿನಿಂದ ನಡೆದುಕೊಂಡು ಬಂದಿದ್ದಲ್ಲ, ಇವರನ್ನೇ ಟಾರ್ಗೆಟ್ ಮಾಡುವುದಕ್ಕಾಗಿಯೇ ಹಲವರು ಕಾದು ಕುಳಿತಂತೆ ಹಲವು ಸಂದರ್ಭಗಳಲ್ಲಿ ಭಾಸವಾಗುತ್ತಿರುತ್ತದೆ. ವಿಷಯ ಸಿಕ್ಕರೆ ಅವರ ಮೇಲೆ ಮುಗಿಬೀಳಲು ಆರಂಭಿಸುತ್ತಾರೆ. ಇತ್ತ ಕಂಗನಾ ರಾಣಾವತ್ ಕೂಡ ಏನೂ ಕಡಿಮೆಯಿಲ್ಲ. ಈಕೆ ಬಾಲಿಪುಡ್ ಸ್ಟಾರ್ ನಟರ ನೆಪೋಟಿಸಂ ವಿರುದ್ಧ ಕಂಗನಾ ಧ್ವನಿ ಎತ್ತಿದಾಗ ಇಡೀ ಬಾಲಿವುಡ್ ನ ಮಹಾನ್ ನಾಯಕ ವರ್ಗವೇ ಇವರ ವಿರುದ್ಧ ಮುಗಿ ಬಿದ್ದಿತ್ತು. ಆದರೂ ನೆಪೋಟಿಸಂ ಬಗ್ಗೆ ಮಾತನಾಡುವುದನ್ನು ಈ ನಟಿ ಬಿಡಲಿಲ್ಲ.
ನೆಪೋಟಿಸಂ ಕರಿನೆರಳಲ್ಲಿ ಬೆಂದು, ನೊಂದವರ ಧ್ವನಿಯಂತೆ ಆಗ ಕಂಗನಾ ಕಾಣಿಸಿದ್ದರು. ನಟಿ ಕಂಗನಾ ಇತಿಹಾಸದಲ್ಲಿ ನಡೆದಿರುವ ಹಲವು ತಪ್ಪುಗಳನ್ನು ಕೂಡ ಹೇಳಿ ಜರಿಯಲು ಹಿಂದೆ ಮುಂದೆ ನೋಡಿಲ್ಲ. ದೇಶದಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ವೇಳೆ ವಿಧಿಸಿದ್ದ ಎಮರ್ಜೆನ್ಸಿಯನ್ನು ಸಿನಿಮಾ ಆಗಿ ತರಲಾಗುತ್ತು. ಈ ಚಿತ್ರದಲ್ಲಿಕಂಗನಾ ಇಂದಿರಾ ಗಾಂಧಿ ಪಾತ್ರ ನಿರ್ವಹಿಸಿದ್ದರು.
ಮಹಾರಾಷ್ಟ್ರದ ಬಾಂದ್ರಾದಲ್ಲಿ ಕಂಗನಾಗೆ ಸಂಬಧಿಸಿದ ಕಟ್ಟಡವನ್ನು ಮಹಾರಾಷ್ಟ್ರ ಸರ್ಕಾರ ಉರುಳಿಸಿದಾಗ ರಾಣಾವತ್ ರನ್ನೇ ಸರ್ಕಾರ ಟಾರ್ಗೆಟ್ ಮಾಡಿದಂತಿತ್ತು. ಆಗ ಅವರ ಪ್ರತಿಯೊಂದು ಹೇಳಿಕೆಯ ವಿರುದ್ಧವೂ ಹಲವರು ಕೇಸ್ ದಾಖಲಿಸಲು ಸರತಿ ಸಾಲಿನಲ್ಲಿ ನಿಂತಂತೆ ಭಾಸವಾಗುತ್ತಿತ್ತು. ಹಲವರಂತೂ ಅವರ ಹೇಳಿಕೆಗಳನ್ನೇ ತಿರುಚಿ ತಿರುಚಿ ಹೇಳೋದನ್ನ ಬಿಡಲಿಲ್ಲ. ಆದರೂ ಕಂಗನಾ ಸೋಲಲಿಲ್ಲ. ಇದೇ ವಿಚಾರದಲ್ಲಿ, ಆಗಿನ ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆಗೆ ಶಾಪ ಹಾಕಿದ್ದರು. ಅಲ್ಲದೇ, ವಿಡಿಯೋವೊಂದನ್ನು ಮಾಡಿ ‘ತುಜೆ ಕ್ಯಾ ಲಗ್ತಾ ಹೈ’ ಎಂದು ಏಕವಚನದಲ್ಲಿಯೇ ಮಾತನಾಡಿದ್ದರು. ಇದಕ್ಕಾಗಿ ಅವರ ವಿರುದ್ಧ ಎರಡು ಕೇಸ್ ಗಳು ದಾಖಲಾಗಿದ್ದವು.
ಇಂತಹ ವಿವಾದಾತ್ಮಕ ಸೆಲೆಬ್ರಿಟಿ ಈಗ ಬಿಜೆಪಿ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅದೂ ಕಾಂಗ್ರೆಸ್ ಪ್ರಭಲವಾಗಿರುವ ಕ್ಷೇತ್ರದಲ್ಲಿ. ಒಂದು ವೇಳೆ ಕಾಂಗ್ರೆಸ್ ಕೋಟೆ ಬೇಧಿಸಿ, ಕಂಗನಾ ಹೊರ ಬಂದರೆ, ಆಕೆ ನಿಜವಾಗಿಯೂ ಗಟ್ಟಿಗಿತ್ತಿನೇ ಸರಿ.
ಬಿಜೆಪಿ ಟಿಕೆಟ್ ಸಿಗುತ್ತಿದ್ದಂತೆ ಮಾತನಾಡಿದ ನಟಿ, ನನಗೆ ಸವಾಲುಗಳು ಹೊಸದೇನಲ್ಲ ಎಂದು ಹೇಳಿದ್ದಾರೆ. ಜನ್ಮಸ್ಥಳ ನನ್ನನ್ನು ಮರಳಿ ಕರೆದಿರುವುದು ನನ್ನ ಅದೃಷ್ಟ. ಮಂಡಿಯ ಜನರು ನನ್ನನ್ನು ಆಯ್ಕೆ ಮಾಡಿದರೆ ನನ್ನ ಕೈಲಾದಷ್ಟು ಸೇವೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಮಂಡಿ ಕ್ಷೇತ್ರದಲ್ಲಿ, 2019ರ ಚುನಾವಣೆಯಲ್ಲಿ ಬಿಜೆಪಿಯ ರಾಮ್ ಸ್ವರೂಪ್ ಶರ್ಮಾ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಆದರೆ, ಅವರು ಕೊರೊನಾ ಕಾರಣಗಳಿಂದ ಸಾವನ್ನಪ್ಪಿದ್ದರು. ಹೀಗಾಗಿ ಇಲ್ಲಿ ನಡೆದ ಉಪ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ 6 ಬಾರಿಯ ಸಿಎಂ ದಿ. ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈಗ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ಕಾಂಗ್ರೆಸ್, ಸಿಪಿಎಂ ಸೇರಿದಂತೆ ಹಲವು ಪಕ್ಷಗಳು ಅಲ್ಲಿ ಇಂಡಿಯಾ ಮೈತ್ರಿಕೂಟದಿಂದ ಸ್ಪರ್ಧೆಗೆ ಅಣಿಯಾಗಿವೆ. ಈಗ ಕಂಗನಾ ಎಂಟ್ರಿ ಕೊಟ್ಟಾಗಿನಿಂದಲಂತೂ ಎಲ್ಲ ವಿರೋಧಿಗಳು ಒಂದೇ ಸಾಲಿನಲ್ಲಿ ಕಾಣಿಸುತ್ತಿದ್ದಾರೆ. ಮಂಡಿ ಲೋಕಸಭಾ ಕ್ಷೇತ್ರವು, ವಿಶ್ವದಲ್ಲಿಯೇ ಅತೀ ಎತ್ತರದ ಮತಗಟ್ಟೆ ಹೊಂದಿರುವ ಕ್ಷೇತ್ರ. ಈ ಕ್ಷೇತ್ರ ಸಮುದ್ರ ಮಟ್ಟದಿಂದ ಸುಮಾರು 15,256 ಅಡಿ ಎತ್ತರದಲ್ಲಿದೆ. ನಟಿ ಕಂಗನಾ ಈ ಎತ್ತರದ ಕ್ಷೇತ್ರವನ್ನೇ ಗೆದ್ದು ಎಲ್ಲರಿಗಿಂತ ಮೇಲೆ ಹಾರಾಡಲಿದ್ದಾರೆಯೇ?.. Lets wait and see