ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇಡಿ ಕಸ್ಟಡಿ ಅವಧಿ ಮತ್ತೆ ನಾಲ್ಕು ದಿನ ವಿಸ್ತರಿಸಲಾಗಿದೆ.
ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಈ ಕುರಿತು ಆದೇಶ ಹೊರಡಿಸಿದೆ. ಕೇಜ್ರಿವಾಲ್ ವಿಚಾರಣೆಗೆ ಸಹಕರಿಸುತ್ತಿಲ್ಲ. ಹೀಗಾಗಿ ಪ್ರಕರಣದ ನಾಲ್ಕು ಜನ ಇನ್ನಿತರ ಆರೋಪಿಗಳೊಂದಿಗೆ ಕೇಜ್ರಿವಾಲ್ ತನಿಖೆ ನಡೆಸಲು ಸಮಯ ಬೇಕು ಎಂದು ಇಡಿ ವಾದಿಸುತ್ತು. ಇಡಿ ವಾದವನ್ನು ಕೋರ್ಟ್ ಪುರಸ್ಕರಿಸಿದೆ.
ಇದಕ್ಕೂ ಮುನ್ನ ಕಸ್ಟಡಿ ಅಂತ್ಯವಾದ ಹಿನ್ನಲೆ ಅರವಿಂದ್ ಕೇಜ್ರಿವಾಲ್ ಅವರನ್ನು ನ್ಯಾಯಲಯದ ಮುಂದೆ ಹಾಜರುಪಡಿಸಲಾಗಿತ್ತು. ಕೋರ್ಟ್ ಪ್ರವೇಶ ಮಾಡುವ ಸಂದರ್ಭದಲ್ಲಿ ಅವರು, ಉದ್ದೇಶಪೂರ್ವಕವಾಗಿ ಸಿಕ್ಕಿಹಾಕಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಜನರೇ ತಕ್ಕ ಉತ್ತರ ಕೊಡುತ್ತಾರೆ ಎಂದು ಹೇಳಿದ್ದರು.
ವಿಚಾರಣೆ ಆರಂಭವಾಗುತ್ತಿದ್ದಂತೆ ತಮ್ಮ ಪರವಾಗಿ ತಾವೇ ವಾದ ಮಂಡಿಸಿದ ಅರವಿಂದ್ ಕೇಜ್ರಿವಾಲ್, ನನ್ನನ್ನು ಸಿಕ್ಕಿ ಹಾಕಿಸುವುದು ಇಡಿಯ ಏಕೈಕ ಉದ್ದೇಶ. ನಾನು ರಿಮಾಂಡ್ ಅನ್ನು ವಿರೋಧಿಸುತ್ತಿಲ್ಲ. ಇಡಿ ಅವರು ಎಲ್ಲಿಯವರೆಗೆ ನನ್ನನ್ನು ಕಸ್ಟಡಿಯಲ್ಲಿ ಇರಿಸಬಹುದು? ಆದರೆ ಇಡಿ ತನಿಖೆಯ ಹೆಸರಿನಲ್ಲಿ ಸುಲಿಗೆ ದಂಧೆ ನಡೆಸುತ್ತಿರುವುದು ನಿಜವಾದ ಹಗರಣ ಎಂದು ವಾದಿಸಿದ್ದಾರೆ. ಕೇಜ್ರಿ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಆಕ್ಷೇಪ ವ್ಯಕ್ತಪಡಿಸಿದ್ದಾರೆ.