ಕನ್ನಡ ಚಿಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ, ನಿರ್ಮಾಪಕ ಬಾ.ಮಾ. ಹರೀಶ್ ಹೃದಯಾಘಾತಕ್ಕೊಳಗಾಗಿದ್ದಾರೆ. ನಿನ್ನೆ ಸಂಜೆ ಇದ್ದಕ್ಕಿದ್ದಂತೆ ಎದೆ ಬಡಿತದಲ್ಲಿ ಏರಿಳಿತ ಕಂಡು ಬಂದ ಪರಿಣಾಮವಾಗಿ, ತೀವೃ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ನಗರದ ‘ಜಯದೇವ’ ಆಸ್ಪತ್ರೆಗೆ ದಾಖಲಿಸಲಾಯಿತು. ಹಠಾತ್ ಹೃದಯಾಘಾತದ ಪರಿಣಾಮ ಮನೆಮಂದಿ, ಸ್ನೇಹಿತರು ಸಂಬಂಧಿಕರಲ್ಲಿ ಆತಂಕದ ವಾತಾವರಣ ಮನೆಮಾಡಿದೆ. ಇಂದು ಜಯದೇವ ಆಸ್ಪತ್ರೆಯಲ್ಲಿ ‘ಎಂಜಿಯೋಗ್ರಾಮ್’ ಮಾಡಲಾಗುವುದು ಎಂದು ಆಪ್ತರು ಮಾಹಿತಿ ನೀಡಿದ್ದಾರೆ. ನಟ ದರ್ಶನ್ ಅಭಿನಯದ ಮೊದಲ ಚಿತ್ರ ‘ಮೆಜೆಸ್ಟಿಕ್’ ಸೇರಿದಂತೆ ಮಾಗಡಿ,ಅಯ್ಯೋ ಪಾಂಡು, ಎಂಬ ಚಿತ್ರಗಳನ್ನು ನಿರ್ಮಾಣ ಮಾಡಿರುವ ಬಾ.ಮಾ. ಹರೀಶ್ ಅವರು, ಈ ಹಿಂದೆ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು. ಸಾ.ರಾ. ಗೊವಿಂದು ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದಾಗ ನಡೆದಿತ್ತು ಎನ್ನಲಾದ “ಟಾಯ್ಲೆಟ್ ರಿನೋವೇಶನ್ ಹೆಸರಲ್ಲಿ ಹಣ ನುಂಗಿದ ಆರೋಪವನ್ನು” ಬಗೆದು ತಂದು ಕೋರ್ಟಿನವರೆಗೂ ಹೊತ್ತೊಯ್ದು ಸಂಚಲನ ಮೂಡಿಸಿದ್ದರು ಬಾ.ಮಾ. ಹರೀಶ್. ಮುಂದೆ ಅದೇ ಹವಾದಲ್ಲಿ ಚೇಂಬರ್ ಅಧ್ಯಕ್ಷರಾಗಿದ್ದರು. ಸದ್ಯ ಹೃದಯಾಘಾತಗೊಂಡು ಆಸ್ಪತ್ರೆಯಲ್ಲಿರುವ ಹರೀಶ್, ಶೀಘ್ರ ಚೇತರಿಸಿಕೊಂಡು ಮರಳಿ ಸಕ್ರೀಯ ಜೀವನದತ್ತ ಹೊರಳಿಕೊಳ್ಳಲಿ ಎಂದು ಮನೆಯವರು,ಆಪ್ತರು ಆಶಿಸುತ್ತಿದ್ದಾರೆ .
