ಎಸ್! ಹಿಂಗಂದಿದ್ದು ದಿಗಂತ್. ಇವರು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡ “ಮಾರಿಗೋಲ್ಡ್” ಚಿತ್ರದ ಡೈಲಾಗ್ ಇದು. ಆರ್.ವಿ. ಕ್ರಿಯೇಷನ್ ಲಾಂಚನದಡಿ, ರಘುವರ್ಧನ್ ನಿರ್ಮಾಣದಲ್ಲಿ, ರಾಘವೇಂದ್ರ ನಾಯಕ್ ನಿರ್ದೇಶನದ ಮಾರಿಗೋಲ್ಡ್ ಚಿತ್ರದ ಟ್ರೈಲರ್ ಬಿಡುಗಡೆಕಂಡು ತಣ್ಣಗೆ ಸದ್ದು ಮಾಡತೊಡಗಿದೆ. ಮೇಲ್ನೋಟಕ್ಕೆ ಚಿತ್ರವು, ಥ್ರಿಲ್ಲರ್ ಎಲಿಮೆಂಟ್ ಅನಿಸುತ್ತಿದ್ದು, ಬಲು ಅಪರೂಪಕ್ಕೆ ನಾಯಕ ದಿಗಂತ್ ನಟೋರಿಯಸ್ ಲುಕ್ಕಲ್ಲಿ ಕಾಣಿಸಿಕೊಂಡಿದ್ದಾರೆ. ಕಳ್ಳ-ಪೊಲೀಸ್ ನಡುವಿನ ಹಾವು-ಏಣಿ ಆಟದಂತೆ ಚಿತ್ರದಲ್ಲಿ ಚುರುಕಿನ ಚಿತ್ರಕತೆ ಹೆಣೆದಂತೆ ಕಂಡು ಬರುತ್ತಿದ್ದು, ಚಿತ್ರದ ಟ್ರೈಲರ್ ಪ್ರಾಮಿಸಿಂಗ್ ಆಗಿದೆ.
ಇತ್ತೀಚೆಗೆ ತೆರೆಕಂಡ “ಒಂದು ಸರಳ ಪ್ರೇಮಕತೆ” ಚಿತ್ರದ ಹಾಡುಗಳ ಮೂಲಕ ಮರಳಿ ಫಾರ್ಮ್ ಕಂಡುಕೊಂಡಿದ್ದ ಸಂಗೀತ ನಿರ್ದೇಶಕ “ವೀರ ಸಮರ್ಥ್” ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಯೋಗರಾಜ್ ಭಟ್, ಕವಿರಾಜ್, ವಿಜಯ್ ಭರಮಸಾಗರ, ರೋಹಿತ್ ಹಳಿಖೇಡ್ ಸಾಹಿತ್ಯ ಪೋಣಿಸಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ, ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ,ಕಲೈ ನೃತ್ಯ, ಅರ್ಜುನ್ ರಾಜ್ ಸಾಹಸ ಚಿತ್ರಕ್ಕಿದೆ. ಕಳೆದ “ಬಿಗ್ ಬಾಸ್” ಮನೆಯಲ್ಲಿ ಸಖತ್ ಸೌಂಡು ಮಾಡಿದ್ದ ನಟಿ ‘ಸಂಗೀತ ಶೃಂಗೇರಿ’ ದಿಗಂತ್ ಜೊತೆ ನಾಯಕಿಯಾಗಿದ್ದು, ಈ ಪಾತ್ರವೂ ಚಿತ್ರದಲ್ಲಿ ಮಗ್ಗಲು ಬದಲಿಸುವ ಪಾತ್ರದಂತೆಯೇ ಟ್ರೈಲರ್ ಹಿಂಟ್ ಕೊಟ್ಟಿದೆ. ಜೊತೆಗೆ ನಟರಾದ ಸಂಪತ್ ಮೈತ್ರೇಯ, ಬಾಲಾ ರಾಜವಾಡಿ, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ, ವಜರಂಗ್ ಶೆಟ್ಟಿ, ಮಹಂತೇಶ್ ಹಿರೇಮಠ್, ಸಂದೀಪ್ ಮಲಾನಿ ಸೇರಿದಂತೆ ಚಿತ್ರದಲ್ಲಿ ತಾರಾಗಣ ತುಂಬಿಕೊಂಡಿದೆ.
ಒಟ್ಟಿನಲ್ಲಿ ಹಲವು ವರ್ಷಗಳಿಂದ ಕಸರತ್ತು ಮಾಡುತ್ತಾ ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸಿದ ಕುಂದಾಪುರ ಮೂಲದ ನಿರ್ದೇಶಕ ರಾಘವೇಂದ್ರ ನಾಯಕ್ ಪ್ರಾಮಿಸಿಂಗ್ ಟ್ರೈಲರ್ ಮೂಲಕ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿಕೊಂಡಿದ್ದಾರೆ. ಸದ್ಯ ಚಿತ್ರದ ಟ್ರೈಲರ್ ಬಿಚ್ಚಿಡುವಂತೆ ಇದೊಂದು ಕಳ್ಳ ಪೊಲೀಸರ ನಡುವಿನ ಕಳ್ಳಾಟದ ಥ್ರಿಲ್ಲರ್ ಎಳೆ ಹೊಂದಿದ್ದು, ಕಥೆ, ಸಂಗೀತ, ಸಂಭಾಷಣೆ, ಮೇಕಿಂಗ್ ಮೂಲಕ “ಮಾರಿಗೋಲ್ಡ್'” ಮೆರಗು ಹೆಚ್ಚಿಸಿಕೊಳ್ಳುವ ನಿರೀಕ್ಷೆ ಇಡಲಾಗಿದೆ. ಇನ್ನು ಪ್ರತಿಭಾವಂತ ನಟ ದಿಗಂತ್ ಹೊಸ ಅವತಾರ, ಸಂಗೀತಾ ಶೃಂಗೇರಿ ಬಿಗ್ ಬಾಸ್ ಫೇಮಿನ ನಂತರದಲ್ಲಿ ಬಿಡುಗಡೆ ಕಾಣುತ್ತಿರುವ ಮೊದಲ ಚಿತ್ರ ಹೀಗೆ ಹತ್ತಾರು ವಿಶೇಷತೆ ಹೊತ್ತು, ಇದೇ ಎಪ್ರೀಲ್ ಐದನೇ ತಾರೀಕು ಚಿತ್ರ ತೆರೆ ಕಾಣುತ್ತಿದೆ.
