ಬೆಂಗಳೂರು: ಅನೈತಿಕ ಸಂಬಂಧ ಹಾಗೂ ವಿಚ್ಛೇದನ ಪಡೆಯಲು 5 ಕೋಟಿ ರೂ. ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದ ಹಿನ್ನೆಲೆಯಲ್ಲಿ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಕಿರುಕುಳ ತಾಳಲಾಗದೆ ಗೋಡೆ ಮೇಲೆಯೇ ಡೆತ್ ನೋಟ್ ಬರೆದು ಪತಿ ನೇಣು ಹಾಕಿಕೊಂಡಿದ್ದಾನೆ. ಸೈಯದ್ ಅಕ್ಮಲ್ ಅನ್ಸರ್ (34) ಆತ್ಮಹತ್ಯೆಗೆ ಶರಣಾದ ಪತಿ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಖತೀಜತುಲ್ ಕುಬ್ರಾ, ಮಾವ ಮುನಾವರ್ ಸುಬಾನ್, ಪತ್ನಿಯ ಸಂಬಂಧಿಕರಾದ ಅಖೀಬ್, ಅಬ್ದುಲ್ ರಹಮ್ಮಾನ್ ಮನ್ಸೂರ್ ಸೇರಿದಂತೆ 7 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಪತ್ನಿಯ ಕೃತ್ಯಕ್ಕೆ ಸಾಥ್ ನೀಡಿ ಪತಿಗೆ ಕಿರುಕುಳ ಕೊಟ್ಟ ಆರೋಪದ ಹಿನ್ನೆಲೆಯಲ್ಲಿ 7 ಜನರ ವಿರುದ್ಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟೆಕ್ಕಿಯಾಗಿದ್ದ ಅಕ್ಮಲ್ ಅನ್ಸರ್ ಕಳೆದ ಏಳು ವರ್ಷದ ಹಿಂದೆ ಕುಬ್ರಾ ಜೊತೆಗೆ ವಿವಾಹವಾಗಿದ್ದರು. ಗೋವಿಂದಪುರ ಫ್ಲಾಟ್ ಒಂದರಲ್ಲಿ ವಾಸವಿದ್ದ ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದರು. ಪತ್ನಿ ಕುಬ್ರಾ ಗಂಡನ ಮೇಲೆ ಅನುಮಾನ ಪಡುತ್ತಿದ್ದಳು. ಹೆಚ್ಚು ಹಣ ಕೊಡುವಂತೆ ಬಲವಂತ ಮಾಡುತ್ತಿದ್ದಳು. ಆದರೆ, ಇತ್ತೀಚೆಗೆ ತಾಯಿ ಮನೆಗೆ ಕುಬ್ರಾ ಬಂದಿದ್ದಳು. ಈ ವೇಳೆ ಅಕ್ಮಲ್ ಅನ್ಸರ್ ಫ್ಲಾಟ್ನಲ್ಲಿ ಒಬ್ಬಂಟಿಯಾಗಿದ್ದ. ಈ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ನನ್ನ ಸಾವಿಗೆ ಪತ್ನಿ ಕುಬ್ರಾ ಹಾಗೂ ಕುಟುಂಬಸ್ಥರು ಕಾರಣ. ಮುನಾವರ್ ಸುಬಾನ್, ಮನ್ಸೂರ್, ಆಖಿಬ್, ಅಜೀಮ್, ಅಬ್ದುಲ್ ರಹಮಾನ್ ನನ್ನ ಜೀವನ ಹಾಳು ಮಾಡಿದರು ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗ ಕರೆ ಸ್ವೀಕರಿಸದಿದ್ದಾಗ ಅನುಮಾನಗೊಂಡ ತಾಯಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.