ತಂದೆಯನ್ನೇ ಅಪ್ರಾಪ್ತ ಮಗನೊಬ್ಬ ಮೂವರು ಶೂಟರ್ ಗಳನ್ನು ನೇಮಿಸಿ ಹತ್ಯೆ ಮಾಡಿಸಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಪ್ರತಾಪ್ಗಢದ ಪಟ್ಟಿ ಪ್ರದೇಶದಲ್ಲಿ ಉದ್ಯಮಿ ಮೊಹಮ್ಮದ್ ನಯೀಮ್ (50) ಎಂಬುವವರನ್ನು ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪಿಯೂಷ್ ಪಾಲ್, ಶುಭಂ ಸೋನಿ ಮತ್ತು ಪ್ರಿಯಾಂಶು ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ಕೃತ್ಯಕ್ಕೆ ನಯೀಮ್‌ನ ಮಗನಿಂದ ಹಣ ಪಡೆದಿದ್ದಾಗಿ ಹೇಳಿದ್ದಾರೆ. ತನ್ನ ತಂದೆಯನ್ನೇ ಹತ್ಯೆ ಮಾಡಿದರೆ 6 ಲಕ್ಷ ರೂ. ನೀಡುವುದಾಗಿ ಮಗ ಭರವಸೆ ನೀಡಿದ್ದ. ಮುಂಗಡವಾಗಿ 1.5 ಲಕ್ಷ ರೂ. ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತಂದೆ ಹೆಚ್ಚಿನ ಪಾಕೆಟ್ ಮನಿ ನೀಡದ ಕಾರಣ ಕೋಪಗೊಂಡು ಹತ್ಯೆ ಮಾಡಿದ್ದಾಗಿ ಮಗ ಹೇಳಿಕೊಂಡಿದ್ದಾನೆ. ತನ್ನ ಆಸೆಗಳನ್ನು ಪೂರೈಸಿಕೊಳ್ಳಲು ಆಗಾಗ ಅಂಗಡಿಯಿಂದ ಹಣ ಅಥವಾ ಮನೆಯಿಂದ ಚಿನ್ನಾಭರಣ ಕದಿಯುತ್ತಿದ್ದ. ಈ ಮೊದಲು ತನ್ನ ತಂದೆಯನ್ನು ಕೊಲ್ಲಲು ಪ್ಲ್ಯಾನ್ ಮಾಡಿ ವಿಫಲನಾಗಿದ್ದ. ಪೊಲೀಸರು ಬಂಧಿತ ಶೂಟರ್‌ಗಳನ್ನು ಜೈಲಿಗೆ ಕಳುಹಿಸಿದ್ದಾರೆ. ಅಪ್ರಾಪ್ತನನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಿದ್ದಾರೆ.