ಆರ್ಸಿಬಿ ವಿರುದ್ಧ ನಡೆದ ಮೊದಲ ಪಂದ್ಯದ ಮೂಲಕ ಎಂ.ಎಸ್. ಧೋನಿ ವಿಶೇಷ ದಾಖಲೆ ಮಾಡಿದ್ದಾರೆ.
ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಭರ್ಜರಿ ಬೌಲಿಂಗ್ ದಾಳಿ ನಡೆಸಿದ ಚೆನ್ನೈ, ಆರ್ಸಿಬಿಗೆ ಆಘಾತ ನೀಡಿತು. ಮುಸ್ತಫಿಜುರ್ ರೆಹಮಾನ್ 4 ವಿಕೆಟ್ ಕಬಳಿಸಿ ಮಿಂಚಿದರು. ಈ ಪೈಕಿ ಕೀಪರ್ ಮಹೇಂದ್ರಸಿಂಗ್ ಧೋನಿ ಎರಡು ಕ್ಯಾಚ್ ಹಿಡಿದರು. ಅನೂಜ್ ರಾವತ್ ಅವರನ್ನು ಮಹೇಂದ್ರ ಸಿಂಗ್ ಧೋನಿ ರನೌಟ್ ಮಾಡಿದ್ದರು. ಈ ರನೌಟ್ನೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನೌಟ್ ಮಾಡಿದ ಆಟಗಾರ ಎಂಬ ದಾಖಲೆಯನ್ನು ಧೋನಿ ತಮ್ಮ 42ನೇ ವಯಸ್ಸಿನಲ್ಲಿ ಬರೆದಿದ್ದಾರೆ.
ಈ ಅಪರೂಪದ ದಾಖಲೆ ರವೀಂದ್ರ ಜಡೇಜಾ ಹೆಸರಿನಲ್ಲಿತ್ತು. 227 ಐಪಿಎಲ್ ಪಂದ್ಯಗಳನ್ನಾಡಿರುವ ಜಡೇಜಾ ಒಟ್ಟು 23 ರನೌಟ್ ಮಾಡಿದ್ದರು. 251ನೇ ಪಂದ್ಯದಲ್ಲಿ ಅನೂಜ್ ರಾವತ್ ಅವರನ್ನು ರನೌಟ್ ಮಾಡುವ ಮೂಲಕ ಧೋನಿ ಈ ದಾಖಲೆ ಬರೆದಿದ್ದಾರೆ. ಐಪಿಎಲ್ನಲ್ಲಿ 24 ರನೌಟ್ ಮಾಡಿ ಸಾಧನೆ ಮೆರೆದಿದ್ದಾರೆ.
ಯಶಸ್ವಿ ವಿಕೆಟ್ ಕೀಪರ್ ಎಂಬ ದಾಖಲೆ ಕೂಡ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದೆ. 251 ಪಂದ್ಯಗಳಲ್ಲಿ ಧೋನಿ 140 ಕ್ಯಾಚ್ ಹಾಗೂ 42 ಸ್ಟಂಪಿಂಗ್ ಮಾಡಿದ್ದಾರೆ.