ಮುಂಬೈ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಆರೋಪಿಗೆ ಮರಣದಂಡನೆ ವಿಧಿಸಲಾಗಿದೆ.
24 ವರ್ಷದ ಅಪರಾಧಿಗೆ ಪುಣೆಯ ಸೆಷನ್ಸ್ ನ್ಯಾಯಾಲಯ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ. ಸಾಕ್ಷ್ಯ ಮರೆಮಾಚಿದಕ್ಕಾಗಿ ಮತ್ತು ಘಟನೆಯನ್ನು ಪೊಲೀಸರಿಗೆ ತಿಳಿಸದ ಆರೋಪದ ಹಿನ್ನೆಲೆಯಲ್ಲಿ ಆತನ ತಾಯಿಗೂ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಈ ಘಟನೆ 2022ರಲ್ಲಿ ನಡೆದಿತ್ತು. 6 ವರ್ಷದ ಅಪ್ರಾಪ್ತ ಬಾಲಕಿ ತನ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಮಾವಲ್ ತಾಲೂಕಿನ ಕಾಮಶೆಟ್ ನಿವಾಸಿ, ಅತ್ಯಾಚಾರ ಮಾಡಿ ಕತ್ತು ಸೀಳಿ ಹತ್ಯೆ ಮಾಡಿದ್ದ. ನಂತರ ದೇಹವನ್ನು ತನ್ನ ಮನೆಯ ಹಿಂದಿನ ಮರದ ಕೆಳಗಿನ ಗುಂಡಿಯಲ್ಲಿ ಹೂತುಹಾಕಲು ಯತ್ನಿಸಿದ್ದಾನೆ.
ಈ ಸಂದರ್ಭದಲ್ಲಿ ಆತನ ತಾಯಿ ತನ್ನ ಮಗನನ್ನು ಶಿಕ್ಷೆಯಿಂದ ರಕ್ಷಿಸಲು ಮೃತ ಬಾಲಕಿಯ ಬಟ್ಟೆ ಹಾಗೂ ವಸ್ತುಗಳನ್ನು ಬಚ್ಚಿಟ್ಟಿದ್ದಾಳೆ. ಆದರೆ, ತನಿಖೆಯ ಸಂದರ್ಭದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಆ ವೇಳೆ ಪೊಲೀಸರು ಅಪರಾಧಿ ಬಂಧಿಸಿದ್ದರು. ಈ ವೇಳೆ ಇಬ್ಬರೂ ಅಪರಾಧಿಗಳು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದರು. ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಬ್ಬರೂ ಅಪರಾಧಿಗಳಿಗೂ ಶಿಕ್ಷೆ ಪ್ರಕಟಿಸಿದೆ. ಅಪರಾಧಿ ಲೈಂಗಿಕ ಹುಚ್ಚನಾಗಿದ್ದಾನೆ. ಕ್ರೂರ ಲೈಂಗಿಕ ಆಲೋಚನೆಗಳಿಂದ ಗೀಳು ಹಚ್ಚಿಕೊಂಡಿದ್ದಾನೆ. ಮಕ್ಕಳ ಅಶ್ಲೀಲತೆ ವೀಕ್ಷಿಸುವ ವ್ಯಸನಿಯಾಗಿದ್ದು, ಅತ್ಯಂತ ಹೇಯ ಕೃತ್ಯ ಎಸಗಿದ್ದಾನೆಂದು ನ್ಯಾಯಾಲಯ ಹೇಳಿದೆ.