ಭ್ರಷ್ಟಾಚಾರದ ವಿರುದ್ಧ ಕಹಳೆ ಊದಿ ಅಧಿಕಾರಕ್ಕೇರಿದ್ದ ಆಮ್ ಆದ್ಮಿ ಪಕ್ಷದ ಕಥೆ ಏನಾಗಿಹೋಗಿದೆಯೋ ನೋಡಿ. ಬೇಲಿಯೇ ಎದ್ದು ಹೊಲ ಮೇಯ್ತು ಅನ್ನುವ ಗಾದೆಯನ್ನು ನೆನಪಿಸುವ ಹಾಗಿವೆ, ಅದರ ಸುತ್ತ ಸುತ್ತಿಕೊಂಡಿರುವ ಹಗರಣಗಳ ಆರೋಪಗಳು. ಖುದ್ದು ಕೇಜ್ರಿವಾಲ್ ಅವರ ಮಂತ್ರಿಮಂಡಲದ ಸಚಿವರುಗಳೇ ಸರದಿ ಸಾಲಿನಲ್ಲಿ ನಿಂತು ಜೈಲು ಪಾಲಾಗಿರುವುದು ಒಂದು ಕಡೆಯಾದರೆ, ಅವರ ಜೊತೆ ಕೈಜೋಡಿಸಿದ ‘ಮಿತ್ರ’ರೂ ಜೈಲು ಸೇರುತ್ತಿರುವುದು ಆ ಪಕ್ಷದ ವಿಶ್ವಾಸಾರ್ಹತೆಯ ಬಗ್ಗೆಯೇ ಆತಂಕ ಹುಟ್ಟಿಸುವ ಸಂಗತಿ.
ದಿನೇದಿನೇ ಅದರ ಸುತ್ತ ಅಬಕಾರಿ ನೀತಿ ಹಗರಣದ ಕುಣಿಕೆ ಬಿಗಿಯಾಗುತ್ತಿರುವುದು ಸುಳ್ಳಲ್ಲ! ಸಮನ್ಸ್ ಮೇಲೆ ಸಮನ್ಸ್ ನೀಡುತ್ತಿದ್ದರೂ ಅರವಿಂದ್ ಕೇಜ್ರಿವಾಲ್ ಕೇರ್ ಮಾಡಿಲ್ಲ ಅನ್ನುವುದೇನೋ ನಿಜವೇ; ಆದರೆ, ಇದೀಗ ಅದೇ ಹಗರಣದ ಸಂಬಂಧ ಬಿಆರ್ಎಸ್ ಪಕ್ಷದ ಕವಿತಾ ಅರೆಸ್ಟಾಗಿರುವುದು ಹಾಗೂ ಅವರು ಮತ್ತು ಕೇಜ್ರಿವಾಲ್ ನಡುವೆ ನೇರ ವ್ಯವಹಾರ ನಡೆದಿತ್ತು ಅನ್ನುವ ಹೊಸ ಆರೋಪ ಬಂದಿರುವುದು ಕೇಜ್ರಿವಾಲ್ ಪಾಲಿಗೆ ನಿಜವಾಗಿಯೂ ಗಂಭೀರವಾಗಬಹುದಾದ ಸಂಗತಿ.
ಈ ಪ್ರಕರಣದಲ್ಲಿ ಮೊದಲು ಜೈಲು ಸೇರಿದ್ದು, ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಸಂಜಯ್ ಸಿಂಗ್. ಆಮೇಲೆ ಒಳಗೆ ಹೋಗಿದ್ದು ಆಪ್ ನ ಸಂವಹನ ಮುಖ್ಯಸ್ಥರಾಗಿದ್ದ ವಿಜಯ್ ನಾಯರ್ ಹಾಗೂ ಇನ್ನೊಬ್ಬ ಸಚಿವ. ಅವರಿಬ್ಬರೂ ಈಗ ಅನಾರೋಗ್ಯದ ಕೀರಣಕ್ಕಾಗಿ ಜಾಮೀನಿನ ಮೇಲಿದ್ದಾರೆ. ಅವರ ಹಿಂದೆಯೇ ಜೈಲಿಗೆ ಹೋದ, ಅವತ್ತಿನ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಇದುವರೆಗೂ ಬೇಲ್ ಸಿಕ್ಕಿಲ್ಲ. ಈಗ, ಬಿಆರೆಸ್ ನ ಕವಿತಾ ಸರದಿ!
ಹಾಗಾದರೆ, ತಮ್ಮದು ಭ್ರಷ್ಟಾಚಾರ ರಹಿತ ಆಡಳಿತ ಎಂದು ಅಬ್ಬರಿಸುತ್ತಿದ್ದ ಅರವಿಂದ್ ಕೇಜ್ರಿವಾಲ್ ತಮ್ಮ ನೈತಿಕ ನೆಲೆಗಟ್ಟು ಕಳೆದುಕೊಂಡಿದ್ದಾರಾ? ಅವರ ಸರ್ಕಾರಕ್ಕೆ ಈ ಹಗರಣ ಮೆತ್ತಿಕೊಂಡಿರುವುದೇಕೆ? Actually, ಏನಿದು ಹಗರಣ?
ರಾಷ್ಟ್ರ ರಾಜಧಾನಿಯಲ್ಲಿ ಲಿಕ್ಕರ್ ಮಾರಾಟದ ನಿಯಮವನ್ನು ಆಪ್ ಸರ್ಕಾರ 2021ರಲ್ಲಿ ಬದಲಾಯಿಸಿತ್ತು. ಖಾಸಗಿ ಸಂಸ್ಥೆಗಳು ರೀಟೇಲ್ ಲಿಕ್ಕರ್ ವಲಯಕ್ಕೆ ಪ್ರವೇಶಿಸಲು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಈ ನಿಯಮ ಜಾರಿಗೆ ತಂದಿತ್ತು. ಈ ನೀತಿ ಜಾರಿಯಾಗಿದ್ದೇ ತಡ ಆಪ್ ಸರ್ಕಾರ ಖಜಾನೆ ತುಂಬಿ ತುಳುಕಲು ಆರಂಭವಾಯಿತು. ವರ್ಷಕ್ಕೆ 9,500 ಕೋಟಿ ರೂ. ಲಾಭದ ಹರಿವನ್ನು ಈ ಯೋಜನೆ ನೀಡುತ್ತದೆ ಎಂದು ಆಪ್ ಹೇಳಿತ್ತು.
ಸರಿ, ಹೊಸ ನಿಯಮದಂತೆ ರೀಟೇಲ್ ಲಿಕ್ಕರ್ ವಲಯವನ್ನು ಖಾಸಗಿ ಸಂಸ್ಥೆಗಳ ಪ್ರವೇಶಕ್ಕೆ ತೆರೆದಿಟ್ಟ ಮೇಲೆ ಹೊಸ ಅಬಕಾರಿ ನೀತಿಯಡಿಯಲ್ಲಿ ದೆಹಲಿಯಾದ್ಯಂತ 849 ಮದ್ಯದ ಅಂಗಡಿಗಳು ಹುಟ್ಟಿಕೊಂಡವು. ಆದರೆ, ಇದರಲ್ಲೇನೋ ಭ್ರಷ್ಟಾಚಾರವಿದೆ ಅನ್ನುವ ವಾಸನೆ ಹಿಡಿದಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳೂ ಈ ನೀತಿಯನ್ನು ವಿರೋಧ ಮಾಡಿದವು. ತನಿಖೆ ನಡೆಸುವಂತೆ ಕೇಂದ್ರ ಸಂಸ್ಥೆಗಳಿಗೆ ಒತ್ತಡ ಹಾಕಿದವು. ಅವರ ಆರೋಪವೇನೆಂದರೆ, ಪರವಾನಗಿ ನೀಡುವುದರಲ್ಲಿ, ಪರವಾನಗಿ ಶುಲ್ಕಗಳ ಮನ್ನಾ ಅಥವಾ ಕಡಿತಗೊಳಿಸುವಲ್ಲಿ, ಹಾಗೂ ಎಲ್-1 ಪರವಾನಗಿಯನ್ನು ಅನುಮೋದನೆಯೇ ಇಲ್ಲದೆ ವಿಸ್ತರಿಸುವಲ್ಲಿ ಲಂಚ ಪಡೆದು ಕಂಪೆನಿಗಳಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಾಗಿದೆ ಅನ್ನುವುದು.
ಆನಂತರ ತನಿಖೆಗೆ ಇಳಿದ ಕೇಂದ್ರ ತನಿಖಾ ಸಂಸ್ಥೆ, ಮೊದಲು 15 ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಿ, ಅವರು ಹಣ ಪಡೆದಿರುವುದನ್ನು ಕಂಡುಹಿಡಿಯಿತು. ಅಲ್ಲಿಂದ ಶುರುವಾಯ್ತು ನೋಡಿ; ದಿನಾ ಒಬ್ಬೊಬ್ಬರೇ ಪ್ರಭಾವಿಯ ಹೆಸರು ಹೊರ ಬರಲಾರಂಭಿಸಿ, ಇದೀಗ ತೆಲಂಗಾಣದ ಮಾಜಿ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಮಗಳು ಕೆ ಕವಿತಾವರೆಗೆ ಬಂದು ನಿಂತಿದೆ. ಸದ್ಯ ಕವಿತಾರನ್ನು ಬಂಧಿಸಿರುವ ಸಿಬಿಐ ಅವರ ವಿಚಾರಣೆ ನಡೆಸುತ್ತಿದೆ.
ಈ ನೀತಿ ಮೂಲಕ ಲಾಭ ಮಾಡಿಕೊಳ್ಳುವುದಕ್ಕಾಗಿ ಕವಿತಾ ಅವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಅಂದಿನ ಡಿಸಿಎಂ ಮನೀಶ್ ಸಿಸೋಡಿಯಾಗೆ 100 ಕೋಟಿ ರೂ ಲಂಚ ನೀಡಿದ್ದಾರೆ ಅನ್ನುವುದು ಇಡಿ ಅಧಿಕಾರಿಗಳ ತನಿಖೆಯಲ್ಲಿ ಪತ್ತೆಯಾಗಿದೆಯಂತೆ. ಇದನ್ನು ಅಧಿಕಾರಿಗಳೇ ತಮ್ಮ ರಿಮ್ಯಾಂಡ್ ಡೈರಿಯಲ್ಲಿ ಉಲ್ಲೇಖಿಸಿದ್ದಾರೆ ಅನ್ನುವುದು ವರದಿಯಾಗಿದೆ.
ಇಷ್ಟೊಂದು ದಾಖಲೆಗಳನ್ನು ಝಳಪಿಸಿ ವಿಚಾರಣೆಗೆ ಕರೆದರೂ, ಕೇಂದ್ರ ತನಿಖಾ ತಂಡದ ಎದುರು ಕೇಜ್ರಿವಾಲ್ ಹಾಜರಾಗಲು ಹಿಂದೇಟು ಹಾಕುತ್ತಿರುವುದೇಕೆ ಅನ್ನುವುದು ಸದ್ಯದ ಪ್ರಶ್ನೆ. ಒಂದು ವೇಳೆ ಈ ಆರೋಪ ಸತ್ಯಕ್ಕೆ ದೂರವಾಗಿದ್ದರೆ ಕೇಜ್ರಿವಾಲ್ ಧೈರ್ಯವಾಗಿಯೇ ತೆರಳಿ ತನಿಖೆ ಎದುರಿಸಬಹುದಿತ್ತಲ್ಲವೇ ಅನ್ನುವುದು, ಅವರ ‘ಇಂಡಿಯಾ ಎಗೇನ್ಸ್ಟ್ ಕರಪ್ಷನ್’ ಚಳವಳಿಯಲ್ಲಿ ಭಾಗಿಯಾಗಿದ್ದವರನ್ನೂ ಕಾಡುವ ಇನ್ನೊಂದು ಪ್ರಶ್ನೆ. ಪ್ರಾಮಾಣಿಕತೆಯ ಹೆಸರಿನಲ್ಲಿ ಅಧಿಕಾರ ಪಡೆದು ನಾಡಿನ ಯುವಜನತೆಯಲ್ಲಿ ಒಂದು ಹೊಸ ಹುರುಪು-ನಿರೀಕ್ಷೆ ಮೂಡಿಸಿದ್ದವರು, ಕೇಜ್ರಿವಾಲ್. ಆ ನಿರೀಕ್ಷೆ-ಹುರುಪಿನ ಜಾಗವನ್ನೀಗ ಆವರಿಸಿರುವುದು ಭ್ರಮನಿರಸನ.