ಎಲೆಕ್ಟೋರಲ್ ಬಾಂಡ್ ವಿವರ ಬಹಿರಂಗವಾಗುತ್ತಲೇ ದೇಶವಾಸಿಗಳ ಗಮನ ಸೆಳೆದದ್ದು ಫ್ಯೂಚರ್ ಗೇಮಿಂಗ್ ಆ್ಯಂಡ್ ಹೋಟೆಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಹೆಸರು. ಈ ಕಂಪನಿಯ ಮಾಲೀಕ, ಲಾಟರಿ ಕಿಂಗ್ ಖ್ಯಾತಿಯ ಸ್ಯಾಂಟಿಯಾಗೊ ಮಾರ್ಟಿನ್.
ಏಪ್ರಿಲ್ 2019 ರಿಂದ ಜನವರಿ 2024ರ ವರೆಗೆ ಈತ ತನ್ನ ಕಂಪನಿಯ ಹೆಸರಲ್ಲಿ ಖರೀದಿಸಿದ ಎಲೆಕ್ಟೋರಲ್ ಬಾಂಡುಗಳ ಮೊತ್ತ ಬರೋಬ್ಬರಿ 1,368 ಕೋಟಿ ರೂಪಾಯಿ.
ಸದ್ಯಕ್ಕೆ ಮಾರ್ಟಿನ್ ಮಾಲೀಕತ್ವದ ಫ್ಯೂಚರ್ ಗೇಮಿಂಗ್ ಕಂಪನಿ ಯಾವ ಯಾವ ಪಕ್ಷಕ್ಕೆ ಈ ಬಾಂಡುಗಳನ್ನು ನೀಡಿದೆ ಅನ್ನೋದರ ವಿವರ ಲಭ್ಯವಿಲ್ಲ. ಆದ್ರೆ, ಮಾರ್ಟಿನ್, ಕಾಂಗ್ರೆಸ್ ನೇತೃತ್ವದ ಇಂಡಿ ಮೈತ್ರಿಯ ಜೊತೆ ಸಂಬಂಧ ಹೊಂದಿದ್ದಾರೆ ಅನ್ನೋ ಅಂಶ ಹೊರಬಿದ್ದಿದೆ. ಇದಕ್ಕೆ ಕೊಂಡಿಯಾಗಿರೋದು ಸ್ಯಾಂಟಿಯಾಗೋ ಮಾರ್ಟಿನ್ ಅವರ ಅಳಿಯ ಆಧವ್ ಅರ್ಜುನ.
ಈ ಆಧವ್ ಅರ್ಜುನ ಕಳೆದ ತಿಂಗಳು ಕಾಂಗ್ರೆಸ್ಸಿನ ಮೈತ್ರಿ ಪಕ್ಷವಾದ ವಿಸಿಕೆ ಪಕ್ಷ ಸೇರಿದ್ದರು. ವಿಡುದಲೈ ಚಿರುದೈಗಳ್ ಕಚ್ಚಿ, ಅಂದ್ರೆ ವಿಸಿಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿಯೂ ಅವರು ನೇಮಕಗೊಂಡಿದ್ದರು. ಇಷ್ಟೇ ಅಲ್ಲ. ಆತ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್ ಅವರ ಅಳಿಯ ಶಬರೀಶನ್ ಅವರ ಆಪ್ತ ಗೆಳೆಯ ಕೂಡ. ಇದಿರಿಂದಾಗಿಯೇ ಅರ್ಜುನ 2024ರ ಚುನಾವಣೆಗೆ ಡಿಎಂಕೆಯ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು. ತಮಿಳುನಾಡಿನ ಪತ್ರಕರ್ತ ಸಾವುಕ್ಕು ಶಂಕರ್ 2023ರಲ್ಲಿ ಈ ಬಗ್ಗೆ ಟ್ವೀಟ್ ಕೂಡ ಮಾಡಿದ್ದರು.
“2024ರ ಚುನಾವಣೆಯ ಉಸ್ತುವಾರಿಯಾಗಿ ಲಾಟರಿ ಕಿಂಗ್ ಮಾರ್ಟಿನ್ ಅವರ ಅಳಿಯ ಅರ್ಜುನ ಅವರನ್ನು ಡಿಎಂಕೆ ನೇಮಿಸಿದೆ ಎಂದು ಮೂಲಗಳು ತಿಳಿಸಿವೆ” ಎಂದು ಆ ಟ್ವೀಟಲ್ಲಿ ಹೇಳಲಾಗಿತ್ತು. ಇಂಥ ಮಾರ್ಟಿನ್ ವಿರುದ್ಧ ಇದೇ ಮಾರ್ಚ್ ತಿಂಗಳ 9 ರಂದು ಇಡಿ ದಾಳಿ ಸಹ ನಡೆದಿತ್ತು. ಅಕ್ರಮ ಮರಳು ಸಾಗಣೆ ಪ್ರಕರಣದಲ್ಲಿ ಈತನ ಮನೆಗಳ ಮೇಲೆ ಈ ದಾಳಿ ನಡೆಸಲಾಗಿತ್ತು. ಈತ ಈ ಬಾರಿ ವಿಸಿಕೆ ಪಕ್ಷದಿಂದ ಲೋಕಸಭಾ ಕಣಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿಗಳೂ ತಮಿಳುನಾಡಿನಲ್ಲಿ ಹಲವು ದಿನಗಳಿಂದ ಹರಿದಾಡುತ್ತಿವೆ. ತಾನು ತನ್ನ ಮಾವನ ಮನೆಯಿಂದ ಯಾವ ಹಣವನ್ನೂ ಪಡೆದಿಲ್ಲ. ನನ್ನ ಬಳಿ ಇರುವುದೆಲ್ಲವೂ ನಾನೇ ದುಡಿದ ಹಣ ಎಂದು ಅರ್ಜುನ ಹೇಳಿಕೊಳ್ಳುತ್ತಾರೆ. ಸರಿ ಹಾಗಾದ್ರೆ, ಇವರ ಮಾವ ಮಾರ್ಟಿನ್ ಅವರ ಹಿನ್ನೆಲೆ ಏನು ಅಂತ ಸ್ವಲ್ಪ ನೋಡಿ.
ಸ್ಯಾಂಟಿಯಾಗೋ ಮಾರ್ಟಿನ್, ಭಾರತದ ಲಾಟರಿ ಮಾರಾಟ ಕ್ಷೇತ್ರದ ಅತಿ ದೊಡ್ಡ ಅವ್ಯವಹಾರದ ಕೇಂದ್ರ ಬಿಂದು. ನಕಲಿ ಲಾಟರಿ ಟಿಕೆಟುಗಳ ಮೂಲಕ ಸಿಕ್ಕಿಂ ಸರ್ಕಾರದ ಬೊಕ್ಕಸಕ್ಕೆ 910 ಕೊಟಿ ರೂಪಾಯಿ ನಷ್ಟ ಉಂಟು ಮಾಡಿದ ಆರೋಪ ಈತನ ಮೇಲಿದೆ. ಆ ನಕಲಿ ಲಾಟರಿ ಟಿಕೆಟುಗಳನ್ನು ಕೇರಳದಲ್ಲಿಮಾರಾಟ ಮಾಡಿ ಈ ನಷ್ಟಕ್ಕೆ ಕಾರಣವಾಗಿದ್ದ ಮಾರ್ಟಿನ್.
ಈ ಪ್ರಕರಣಕ್ಕೆ ಸಂಬಂಧಿಸದಂತೆ 2021ರಲ್ಲಿ ಜಾರಿ ನಿರ್ದೇಶನಾಲಯ ಈತನ ಸುಮಾರು 450 ಕೋಟಿ ರೂಗಳಷ್ಟು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಇದಕ್ಕಿಂತ 2 ವರ್ಷ ಮುಂಚೆ, ಅಂದ್ರೆ 2019ರಲ್ಲಿ, ಅಕ್ರಮ ಹಣ ವರ್ಗಾವಣ ಕೇಸಿನಲ್ಲಿ ಇಡಿ ಈತನಿಗೆ ಸೇರಿದ 19 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.
2016 ರಲ್ಲಿ, ಜಾರಿ ನಿರ್ದೇಶನಾಲಯ ದಾಖಲಿಸಿದ ಪ್ರಕರಣದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಾನೂನು ಸಲಹೆಗಾರ ಎಂಕೆ ದಾಮೋದರನ್ ಸ್ಯಾಂಟಿಯಾಗೊ ಮಾರ್ಟಿನ್ ಪರ ವಾದ ಮಂಡಿಸಿದ್ದರು. ಮಾರ್ಟಿನ್ 50 ಕೋಟಿ ರೂ. ಖರ್ಚು ಮಾಡಿ ಕರುಣಾನಿಧಿ ಚಿತ್ರಕಥೆಯುಳ್ಳ 75ನೇ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಚಿತ್ರದ ಕಥೆ ಬರೆಯಲು ಸ್ವತಃ ಕರುಣಾನಿಧಿ 45 ಲಕ್ಷ ರೂ. ಸಂಭಾವನೆ ಪಡೆದಿದ್ದರಂತೆ..
2007ರಲ್ಲಿ ಸಿಪಿಐಎಂ ಮುಖವಾಣಿ ಪತ್ರಿಕೆ ದೇಶಾಭಿಮಾನಿಗೆ ಮಾರ್ಟಿನ್ 2 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. ಈ ವಿಷಯ ಬಹಿರಂಗವಾಗುತ್ತಲೇ ಕಮ್ಯುನಿಸ್ಟ್ ಪಕ್ಷದ ಈ ನಡೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಬಳಿಕ ಪ್ರಕಾಶ್ ಕಾರಟ್ ನೇತೃತ್ವದ ಸಿಪಿಐಎಂ ಆ ಹಣವನ್ನು ಮಾರ್ಟಿನ್ ಗೆ ವಾಪಸ್ ನೀಡಿತ್ತು.
ಹಿರಿಯ ಕಾಂಗ್ರೆಸ್ ನಾಯಕ ಮತ್ತು ವಕೀಲ ಅಭಿಷೇಕ್ ಮನು ಸಿಂಘ್ವಿ 2010 ರಲ್ಲಿ ಕೇರಳ ಹೈಕೋರ್ಟ್ನಲ್ಲಿ ಸ್ಯಾಂಟಿಯಾಗೊ ಮಾರ್ಟಿನ್ ವಿರುದ್ಧ ವಕಾಲತ್ತು ವಹಿಸಿದ್ರು. ಆದರೆ, ಕಮ್ಯುನಿಸ್ಟರ ವಿರೋಧದಿಂದಾಗಿ ಅವರು ಪ್ರಕರಣದಿಂದ ಹಿಂದೆ ಸರಿಯಬೇಕಾಯಿತು. ಇನ್ನೊಂದು ಕಡೆ ತೃಣಮೂಲ ಕಾಂಗ್ರೆಸ್ ಸಚಿವ ಅನುಬ್ರತಾ ಮಂಡಲ್ ಮತ್ತು ಅವರ ಪುತ್ರಿ ಮೂರು ವರ್ಷಗಳಲ್ಲಿ 5 ಬಾರಿ ಅಲ್ಲಿನ ಡಿಯರ್ ಲಾಟರಿ ಬಂಪರ್ ಬಹುಮಾನ ಗೆದ್ದಿದ್ದು ಈ ಮಾರ್ಟಿನ್ ಕೈಚಳಕದಿಂದಲೇ ಎಂಬ ಆರೋಪ ಬಂದಿತ್ತು. 2022ರಲ್ಲಿ ಸಿಬಿಐ ಈ ಸಂಬಂಧ ತನಿಖೆ ಕೂಡ ಆರಂಭಿಸಿತ್ತು. ಈಗ ಟಿಎಂಸಿಯ ಈ ಜೋಡಿ ಜೈಲಿನಲ್ಲಿದೆ.
ಇಂಥ ಹಿನ್ನೆಲೆಯ ಮಾರ್ಟಿನ್ ಮಾಲೀಕತ್ವದ ಫ್ಯೂಚರ್ ಗೇಮಿಂಗ್ ಕಂಪನಿ ಎಲೆಕ್ಟೊರಲ್ ಬಾಂಡುಗಳನ್ನು ಖರೀದಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮಾರ್ಟಿನ್ ಅಳಿಯ ಕಾಂಗ್ರೆಸ್ ನೇತೃತ್ವದ ಇಂಡಿ ಮೈತ್ರಿ ಕೂಟದ ಪಕ್ಷವೊಂದರ ಮುಖಂಡನಾಗಿದ್ದಾನೆ.
ಎಲೆಕ್ಟೋರಲ್ ಬಾಂಡುಗಳ ಸುತ್ತ ದೊಡ್ಡ ಹಂಗಾಮ ಎಬ್ಬಿಸ್ತಾ ಇರೋ ಕಾಂಗ್ರೆಸ್ ಈಗ ಫ್ಯೂಚರ್ ಗೇಮಿಂಗ್ ಕಂಪನಿಯೊಂದಿಗೆ ತನಗೆ ಹಾಗೂ ತನ್ನ ಮಿತ್ರ ಪಕ್ಷಗಳಿಗೆ ಇರುವ ನಂಟನ್ನು ಬಹಿರಂಗಪಡಿಸಬೇಕು ಅನ್ನೋದು ದೇಶದ ನಾಗರೀಕರ ನಿರೀಕ್ಷೆ.