ಸಿಡಿಲಬ್ಬರದಲ್ಲಿ ಆರು ತಿಂಗಳ ಹಿಂದೆ ಹುಟ್ಟಿದ್ದ ಸಾಂದರ್ಭಿಕ ಶಿಶು. ಇನ್ನೇನು ಮುಗಿದೇ ಹೋಯಿತು ಮೋದಿ ಪರ್ವ ಅನ್ನುವಷ್ಟರ ಮಟ್ಟಿಗೆ ಧೂಳೆಬ್ಬಿಸಿದ್ದ ವಿಪಕ್ಷ ಸೇನಾ ಜಮಾವಣೆ ಅದು.
ಆರೇ ತಿಂಗಳು, ಅಷ್ಟೇ, ಧೂಳು ಅಡಗಿದೆ. ಸೈನ್ಯದ ತುಕಡಿಗಳು ಅಲ್ಲಲ್ಲಿ ಚದುರಿದಂತೆ ಕಾಣುತ್ತಿವೆ. ಅನೇಕ ಸೇನಾಪತಿಗಳೇ ಚಿತ್ರಬಿಟ್ಟು ಪಕ್ಕಕ್ಕೆ ಸರಿದಿದ್ದಾರೆ! ಇಲ್ಲಿ ಸ್ನೇಹ ಅಲ್ಲಿ ದ್ರೋಹ ಅನ್ನುವಂತಾಗಿಹೋಗಿದೆ ಮೈತ್ರಿಯ ಕಥೆ. ಮೋದಿಯ ಅಶ್ವಮೇಧ ಕುದುರೆಯಂತಿರುವ ಬಿಜೆಪಿ ಪಡೆ ಕಟ್ಟಿ ಹಾಕುವುದಕ್ಕಾಗಿ ರಚನೆಯಾಗಿದ್ದ ಕೂಟ, ಐಎನ್’ಡಿಐ, ಅಥವಾ ಇಂಡಿ. ಆದರೆ, ಈಗ ಅದು ತಾನೇ ಒಳಗೊಳಗೆ ವಿಭಜನೆಗೊಂಡು, ಅನೇಕ ಕಡೆಗಳಲ್ಸಿ ಇಂಡಿ ವರ್ಸಸ್ ಇಂಡಿ ಹೋರಾಟವೇ ಆಗಿಹೋಗಿದೆ. ಬಿಜೆಪಿ ನೇತೃತ್ವದ ಎನ್’ಡಿಎ ಒಕ್ಕೂಟ ನಿಜವಾದ ಅರ್ಥದಲ್ಲಿ ಒಕ್ಕೂಟವಾಗೇ ಉಳಿದುಕೊಂಡು ಯುದ್ಧಕ್ಕೆ ಹೊರಟಿದೆ.
ಇಂಡಿ ಮೈತ್ರಿಕೂಟಕ್ಕೆ ಜನ್ಮ ಕೊಟ್ಟಿದ್ದು, ಬಿಹಾರದ ನೆಲ. ಅಲ್ಲಿನ ಸಾಮ್ರಾಟ ನಿತೀಶ್ ಈಗ ಮೋದಿ ಮಿತ್ರ. ಹರಿಯಾಣ ಹಾಗೂ ದೆಹಲಿಯಲ್ಲಿ ಕಾಂಗ್ರೆಸ್ ಹಾಗೂ ಎಎಪಿ ಜೋಡೆತ್ತುಗಳು, ಆದರೆ ಪಂಜಾಬ್ ನಲ್ಲಿ ಮಾತ್ರ ಜಗವೈರಿಗಳು! ಎಡ ಪಕ್ಷಗಳದ್ದು ಎಲ್ಲಕಡೆಯೂ ಕಾಂಗ್ರೆಸ್ ಜೊತೆ ಕಾಫಿಕೂಟ, ಪಶ್ಚಿಮ ಬಂಗಾಳದಲ್ಲಿ ಸ್ಪೆಶಲ್ ಬಾಂಡ್; ಕೇರಳದಲ್ಲಿ ಮಾತ್ರ ಬದ್ಧ ಜಿದ್ದಿನ ಕತ್ತಿವರಸೆ!
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕಿ ಮಮತಾರಿಂದ ಇಡೀ ಇಂಡಿ ಕೂಟಕ್ಕೇ ಮಂಗಳಾರತಿ. ಎಲ್ಲ 42 ಕ್ಷೇತ್ರಗಳಲ್ಲೂ ಮಮತಾ ಅಭ್ಯರ್ಥಿಗಳ ಕಿಡಿ. ಪರಸ್ಪರ ಸಂತೈಸಿಕೊಳ್ಳುವುದಕ್ಕೆ ಕಾಂಗ್ರೆಸ್-ಲೆಫ್ಟ್ ಜೋಡಿ. ಮಹಾರಾಷ್ಟ್ರದಲ್ಲಿ ತ್ರಿವಳಿಗಳ ಅಘಾಡಿಯಾದ ಕಾಂಗ್ರೆಸ್- ಉದ್ಧವ್-ಶಿವಸೇನಾ ಹಾಗೂ ಶರದ್ ಪವಾರ್-ಎನ್’ಸಿಪಿ ಮಧ್ಯೆ ತ್ರಿವಳಿ ತಲಾಖ್ ಕೊಡಲಾಗದ-ಬಿಡಲಾಗದ ಸಂಕಟ. ಸೀಟು ಹಂಚಿಕೆಯೊಂಬುದು ಕಗ್ಗಂಟು. ಆದರೆ ಎನ್’ಡಿಎ ಫುಲ್ ಸೆಟಲ್.
ಜಮ್ಮು ಕಾಶ್ಮೀರದಲ್ಲಿ ಎನ್ ಸಿ-ಪಿಡಿಪಿ ಮಧ್ಯೆ ಕಿತ್ತಾಟ ನಿರಂತರ. ದಾರಿ ಕಾಣದೆ ಕಾಂಗ್ರೆಸ್ ಕಂಗಾಲು. ಹೀಗೆ ಒಂದೆಡೆ ಒಂದಾಗಿ, ಮತ್ತೊಂದೆಡೆ ತೊಡೆ ತಟ್ಟಿ ನಿಂತಿರುವ ಈ ಮೈತ್ರಿ ಕೂಟ, ಮೈತ್ರಿ ಅನ್ನುವ ಪದಕ್ಕೇ ಹೊಸ ಅರ್ಥ ಕೊಡಲು ಹೊರಟಿದೆ. ಯಾಕೋ ಎತ್ತು ಏರಿಗೆ-ಕೋಣ ನೀರಿಗೆ ಗಾದೆ ನೆನಪಾದರೆ, ತಪ್ಪು ನಿಮ್ಮದಲ್ಲ!