ತೆಂಗಿನಕಾಯಿ ರಾಬ್ರಿ (ರಾಬ್ಡಿ) ಹಲವೆಡೆ ಜನಪ್ರಿಯ ತಿನಿಸುಗಳಲ್ಲಿ ಒಂದು. ಈ ತಿಂಡಿ ಉತ್ತರ ಭಾರತದ ಪ್ರಮುಖ ಸಿಹಿ. ಇದನ್ನು ಮಾಡಿದರೆ ಸಾಕು ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಈ ಸಿಹಿ ಉತ್ತರ ಪ್ರದೇಶದ ಮಥುರಾದಲ್ಲಿ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ. ಇದು ಚಿಕ್ಕಮಕ್ಕಳಿಂದ ಹಿಡಿದು ವಯಸ್ಕರವರೆಗೂ ನೆಚ್ಚಿನ ಸಿಹಿಯಾಗಿದೆ.
ಹಾಗಾದರೆ ಈ ರಾಬ್ರಿ ಮಾಡುವುದು ಹೇಗೆ ಎಂಬುವುದನ್ನು ನಿಮ್ಮ ಮುಂದೆ ಹೇಳ್ತೇವಿ ನೋಡಿ…
ಬೇಕಾಗುವ ಸಾಮಗ್ರಿಗಳು:
ಗೋಡಂಬಿ – 10-15
ಏಲಕ್ಕಿ ಪುಡಿ – ಅಗತ್ಯಕ್ಕೆ ತಕ್ಕಷ್ಟು
ಹೆಚ್ಚಿದ ಬಾದಾಮಿ ಮತ್ತು ಪಿಸ್ತಾ – ಸ್ವಲ್ಪ
ಕೇಸರಿ – ಸ್ವಲ್ಪ
ಕ್ರೀಮ್ ಮಿಲ್ಕ್ – 1 ಲೀಟರ್
ತುರಿದ ತೆಂಗಿನಕಾಯಿ – ಅರ್ಧ ಕಪ್
ಖೋಯಾ – ಅರ್ಧ ಕಪ್
ಸಕ್ಕರೆ – ಅಗತ್ಯಕ್ಕೆ ತಕ್ಕಷ್ಟು
ರಾಬ್ರಿ (ರಾಬ್ಡಿ) ಮಾಡುವ ವಿಧಾನ:
- ಮೊದಲಿಗೆ ಒಂದು ಬೌಲ್ ನಲ್ಲಿ ಗೋಡಂಬಿ ಹಾಕಿ, ಅದಕ್ಕೆ ನೀರು ಹಾಕಿ 15 ನಿಮಿಷಗಳ ಕಾಲ ನೆನೆಸಿಡಬೇಕು.
- ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಕ್ರೀಮ್ ಮಿಲ್ಕ್ ಹಾಕಿಕೊಂಡು ಕುದಿಸಿಕೊಳ್ಳಬೇಕು. ಹಾಲು ಕುದಿಯಲು ಆರಂಭವಾದ ನಂತರ ಗ್ಯಾಸ್ ಅನ್ನು ಮೀಡಿಯಮ್ ಫ್ಲೇಮ್‌ನಲ್ಲಿ ಇಟ್ಟು, ಹಾಲು ಸ್ವಲ್ಪ ಕುಂದುವವರೆಗೆ ಕುದಿಸಿಕೊಳ್ಳಿ. ಈ ಸಂದರ್ಭದಲ್ಲಿ ಮಧ್ಯ ಮಧ್ಯ ಹಾಲನ್ನು ತಿರುವಿಕೊಳ್ಳುವುದು ಒಳ್ಳೆಯದು.
- ನಂತರ ಇದಕ್ಕೆ ಕೇಸರಿ ಮತ್ತು ಖೋಯಾವನ್ನು ಹಾಕಿಕೊಂಡು ಹಾಲು ತಳಹಿಡಿಯದಂತೆ ಚನ್ನಾಗಿ ತಿರುವಿಕೊಳ್ಳಬೇಕು.
- ನೆನೆಸಿಟ್ಟ ಗೋಡಂಬಿಯನ್ನು ಒಂದು ಮಿಕ್ಸರ್‌ನಲ್ಲಿ ಹಾಕಿ ಚನ್ನಾಗಿ ರುಬ್ಬಿಕೊಳ್ಳಬೇಕು.
- ಕುದಿಯುತ್ತಿರುವ ಹಾಲಿಗೆ ತುರಿದ ತೆಂಗಿನಕಾಯಿ ಹಾಗೂ ಸಕ್ಕರೆಯನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಇದಕ್ಕೆ ರುಬ್ಬಿದ ಗೋಡಂಬಿ ಮಿಶ್ರಣವನ್ನೂ ಸೇರಿಸಿಕೊಂಡು ಮತ್ತೊಮ್ಮೆ ತಿರುವಿಕೊಳ್ಳಬೇಕು.
- ಹಾಲು ಮಂದವಾಗುತ್ತಿದ್ದಂತೆ ಏಲಕ್ಕಿ ಪುಡಿ ಹಾಕಿಕೊಂಡು ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಬೇಕು.
- ಒಂದು ಸರ್ವಿಂಗ್ ಬೌಲ್‌ನಲ್ಲಿ ತೆಂಗಿನಕಾಯಿ ರಾಬ್ರಿಯನ್ನು ಹಾಕಿಕೊಂಡು ಅದರ ಮೇಲೆ ಹೆಚ್ಚಿದ ಬಾದಾಮಿ ಮತ್ತು ಪಿಸ್ತಾ ಹಾಕಿ ಸವಿಯಲು ಕೊಡಬೇಕು.