ನವದೆಹಲಿ: ಮುಂಬೈ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಬೆಂಕಿ ಆಟಕ್ಕೆ ಗುಜರಾತ್ ಜೈಂಟ್ಸ್ ಮಹಿಳಾ ತಂಡ ಶರಣಾಗಿದೆ.
ಮೊದಲು ಬ್ಯಾಟ್ ಮಾಡಿದ ಗುಜರಾತ್ 191 ರನ್ ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಮುಂಬಯಿ ಇಂಡಿಯನ್ಸ್ 7 ವಿಕೆಟ್ ಗಳ ಜಯ ಸಾಧಿಸಿತು. 19.5 ಓವರ್‌ಗಳಲ್ಲಿ ಗುರಿ ತಲುಪಿತು. ಕೊನೆಯ 2 ಓವರ್ ನಲ್ಲಿ ಮುಂಬೈ ಗೆಲುವಿಗೆ 23 ರನ್‌ಗಳ ಅಗತ್ಯವಿತ್ತು, ಈ ವೇಳೆ ಹರ್ಮನ್‌ಪ್ರೀತ್ ಕೌರ್ ಸಿಕ್ಸರ್, ಬೌಂಡರಿ ನೆರವಿನಿಂದ 11 ಎಸೆತಗಳಲ್ಲೇ ಗುರಿ ತಲುಪುವಂತಾಯಿತು. 19ನೇ ಓವರ್‌ನಲ್ಲೇ 10 ರನ್ ಗಳಿಸಿದ ಮುಂಬೈ, ಕೊನೆಯ 5 ಎಸೆತಗಳಲ್ಲೇ 13 ರನ್ ಬಾರಿಸಿತು. ಕೊನೆಯ 30 ಎಸೆತಗಳಲ್ಲಿ ಮುಂಬೈ ಬರೋಬ್ಬರಿ 72 ರನ್ ಸಿಡಿಸಿ ಗೆಲುವು ಸಾಧಿಸಿ, ಪ್ಲೇ ಆಫ್ ಕನಸು ನನಸು ಮಾಡಿಕೊಂಡಿತು.
ಈ ಪಂದ್ಯದಲ್ಲಿ ಬರೀ ಸಿಕ್ಸರ್, ಬೌಂಡರಿಗಳದ್ದೇ ಆರ್ಭಟ ಎನ್ನುವಂತಾಗಿತ್ತು. ಬರೋಬ್ಬರಿ 44 ಬೌಂಡರಿ, 13 ಸಿಕ್ಸರ್‌ಗಳು ದಾಖಲಾದವು. ಈ ಪೈಕಿ ಮುಂಬೈ ಪರ 22 ಬೌಂಡರಿ, 7 ಸಿಕ್ಸರ್ ಸಿಡಿದರೆ, ಗುಜರಾತ್ ಪರ 22 ಬೌಂಡರಿ, 6 ಸಿಕ್ಸರ್‌ಗಳು ದಾಖಲಾದವು.
ಮುಂಬೈ ತಂಡ ಆರಂಭದಲ್ಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. ಮುಂಬೈ ಪರ ಯಾಸ್ತಿಕಾ ಭಾಟಿಯಾ 49 ರನ್, ಹೇಲಿ ಮ್ಯಾಥೀವ್ಸ್ 18 ರನ್, ನಟಾಲಿ ಸ್ಕಿವರ್ ಬ್ರಂಟ್ 2 ರನ್ ಗಳಿಸಿ ಪೆವಿಲಿಯನ್ ಸೇರಿದರು. ಹರ್ಮನ್ ಪ್ರೀತ್‌ಕೌರ್ 48 ಎಸೆತಗಳಲ್ಲಿ ಅಜೇಯ 95 ರನ್ (10 ಬೌಂಡರಿ, 5 ಸಿಕ್ಸರ್) ಸಿಡಿಸುವ ಮೂಲಕ ಗೆಲುವು ತಂದು ಕೊಟ್ಟರು.
ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ತಂಡ ದಯಾಳನ್ ಹೇಮಲತಾ, ನಾಯಕಿ ಬೆತ್ ಮೂನಿ ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು.