ನವದೆಹಲಿ: ದೇಶದಲ್ಲಿ ಲೋಕಸಭೆ ಚುನಾವಣೆಯ ತಯಾರಿ ಭರ್ಜರಿಯಾಗಿ ನಡೆದಿದ್ದು, ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಕೇಂದ್ರದ 34 ಹಾಲಿ ಸಚಿವರು ಹಾಗೂ ಇನ್ನಿತರ ಪ್ರಮುಖರಿಗೆ ಮಣೆ ಹಾಕಿದೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 370 ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸುವ ಮೊದಲೇ ಬಿಜೆಪಿ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಈ ಮೂಲಕ ಚುನಾವಣಾ ತಯಾರಿ ಆರಂಭಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಉತ್ತರ ಪ್ರದೇಶದ ವಾರಣಾಸಿಯಿಂದ ಸ್ಪರ್ಧಿಸಲಿದ್ದಾರೆ. ಈಗಾಗಲೇ ಪ್ರಧಾನಿ ಎರಡು ಬಾರಿ ಗೆದ್ದಿದ್ದಾರೆ. ಈಗ ಹ್ಯಾಟ್ರಿಕ್ ಗೆಲುವಿಗೆ ತಯಾರಿ ನಡೆಸಿದ್ದಾರೆ. 2014 ರಲ್ಲಿ ಪಿಎಂ ಮೋದಿ ಅವರು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಕೇಜ್ರಿವಾಲ್ ವಿರುದ್ಧ ಗೆದ್ದಿದ್ದರು. 2019 ರಲ್ಲಿ ಸಮಾಜವಾದಿ ಪಕ್ಷದ ಶಾಲಿನಿ ಯಾದವ್ ವಿರುದ್ಧ ಗೆಲುವು ಸಾಧಿಸಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್‌ನ ಗಾಂಧಿನಗರದಿಂದ ಸ್ಪರ್ಧಿಸಲಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಕ್ನೋದಿಂದ ಕಣಕ್ಕಿಳಿಯಲಿದ್ದಾರೆ. ಸ್ಮೃತಿ ಇರಾನಿಗೆ ಅಮೇಥಿ ಕ್ಷೇತ್ರ ನೀಡಲಾಗಿದೆ. ರಾಜ್ಯಸಭಾ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಧ್ಯಪ್ರದೇಶದ ಗುನಾದಿಂದ ಸ್ಪರ್ಧಿಸಲಿದ್ದಾರೆ. ಮಥುರಾ ಕ್ಷೇತ್ರದಿಂದ ನಟಿ-ರಾಜಕಾರಣಿ ಹೇಮಾ ಮಾಲಿನಿ ಮತ್ತೆ ಕಣಕ್ಕಿಳಿಯಲಿದ್ದಾರೆ. ಭೂಪೇಂದರ್ ಯಾದವ್ ತಮ್ಮ ಮೊದಲ ಲೋಕಸಭೆ ಚುನಾವಣೆಗೆ ಕಾಲಿಡುತ್ತಿದ್ದು, ರಾಜಸ್ಥಾನದ ಅಲ್ವಾರ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.