ಹಲವಾರು ಸಿನಿಮಾಗಳಲ್ಲಿ ನಟಿಸಿ ಸಾಕಷ್ಟು ಹೆಸರು ಮಾಡಿರುವ ಹಿರಿಯ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರು ಈಗ ಮತ್ತೊಮ್ಮೆ ಕಿರುತೆರೆಯತ್ತ ಮುಖ ಮಾಡಿದ್ದಾರೆ.
ಹಿರಿತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಟೆನ್ನಿಸ್ ಕೃಷ್ಣ ಅವರು ಹಿಂದೆ ಕೂಡ ಕಿರುತೆರೆಯಲ್ಲಿ ಬಣ್ಣ ಹಚ್ಚಿದ್ದರು. ಆದರೆ, ಈಗ ಮತ್ತೊಮ್ಮೆ ಧಾರಾವಾಹಿ ಲೋಕದತ್ತ ಮುಖ ಮಾಡಿದ್ದಾರೆ. ಲಕ್ಷ್ಮಿ ಟಿಫನ್ ರೂಮ್ ಸೀರಿಯಲ್ ಮೂಲಕ ನಟ ಟೆನ್ನಿಸ್ ಕೃಷ್ಣ ಬಣ್ಣ ಹಚ್ಚಲಿದ್ದಾರೆ ಎಂದು ತಿಳಿದು ಬಂದಿದೆ. ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರು 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ರೇಖಾ ದಾಸ್ ಹಾಗೂ ಟೆನ್ನಿಸ್ ಕೃಷ್ಣ ಅವರು 90ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ, ಮೋಡಿ ಮಾಡಿದ್ದರು.
ಈ ಧಾರಾವಾಹಿಯಲ್ಲಿನ ಕಥಾ ನಾಯಕಿ ವರಲಕ್ಷ್ಮಿ ನೇರ ನುಡಿ ಹೊಂದಿರುವ ಮಹಿಳೆ. ನ್ಯಾಯದ ಪರ ನಿಲ್ಲುವ ಗಟ್ಟಿಗಿತ್ತಿ. ಐಎಎಸ್ ಮಾಡಬೇಕೆಂಬ ಕನಸನ್ನು ಕಂಡಿರುತ್ತಾಳೆ. ಆದರೆ ಪರಿಸ್ಥಿತಿಯ ಕೈಗೊಂಬೆಯಾಗಿ, ಹೆಣ್ಣು ಮಕ್ಕಳು ಕೇವಲ ಅಡುಗೆ ಮನೆಗೆ ಸೀಮಿತ ಎಂಬ ಮನಸ್ಥಿತಿಯಿರುವ ಮನೆತನಕ್ಕೆ ಸೊಸೆಯಾಗಿ ಹೋಗುತ್ತಾಳೆ. ಆ ಮನೆಯ ರೀತಿ ರಿವಾಜುಗಳು, ಕಟ್ಟುಪಾಡುಗಳನ್ನು ಭೇಧಿಸಿ ತನ್ನ ಗಂಡನ ಮನೆಯಲ್ಲಿನ ಎಲ್ಲ ಸವಾಲುಗಳನ್ನು ಎದೆರಿಸಿ ಐಎಎಸ್ ಆಗುತ್ತಾರಾ? ಅಥವಾ ಸಂಸಾರ ಜಂಜಾಟ ಅವರ ಕನಸನ್ನು ಕಮರಿಸುತ್ತದೆಯಾ? ಎಂಬುವುದು ಈ ಕಥೆಯ ಸಾರಾಂಶವಾಗಿದೆ. ಸದ್ಯ ಈ ಧಾರಾವಾಹಿಯಲ್ಲಿ ನಟ ಟೆನ್ನಿಸ್ ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದಾರೆ.
ಅಲ್ಲದೇ, ಈ ಧಾರಾವಾಹಿಯಲ್ಲಿ ಸುನೇತ್ರ ಪಂಡಿತ್, ಅನಂತವೇಲು, ವಚನ್, ಮಧುಮಿತಾ, ವಿಜಯಲತಾ, ಕಾವ್ಯ, ಪ್ರೀತಮ್ ಮಕ್ಕಿಹಾಳಿ, ಭಗತ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.