ಬೆಂಗಳೂರು: ರವೆ ಇಡ್ಲಿ ತಿಂದ ನಂತರ ಬಾಂಬರ್ ಬಾಂಬ್ ಇಟ್ಟಿದ್ದಾನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ವೈಟ್ ಫೀಲ್ಡ್ ಹತ್ತಿರ ಇರುವ ಬ್ರೂಕ್ ಫೀಲ್ಡ್ ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿದ್ದು ಸ್ಥಳಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್ ಭೇಟಿ ನೀಡಿ ಪರಿಶೀಲಿ ಮಾಹಿತಿ ಪಡೆದಿದ್ದಾರೆ.
ಈ ವೇಳೆ ಮಾತನಾಡಿದ ಡಿಕೆಶಿ, ಸಿಸಿಬಿ ಪೊಲೀಸರು (CCB Police) ಬಾಂಬ್ ಇಟ್ಟ ಆರೋಪಿ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರೋಪಿಯ ಕುರಿತು ಸದ್ಯ ಬಹುತೇಕ ಮಾಹಿತಿ ಸಿಕ್ಕಿದೆ. ಬಸ್‌ನಲ್ಲಿ ಬಂದು, ಹೋಟೆಲ್‌ನಲ್ಲಿ ರೆವೆ ಇಡ್ಲಿ ತಿಂದು ಆಮೇಲೆ ಬಾಂಬ್ ಇಟ್ಟು ಹೋಗಿದ್ದಾನೆ. ಮಾಸ್ಕ್ ಧರಿಸಿ ಬಂದಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಹೋಟೆಲ್ ನಲ್ಲಿ ಬ್ಯಾಗ್ ಇಟ್ಟು ಹೋದ 1 ಗಂಟೆ ನಂತರ ಅದು ಬ್ಲಾಸ್ಟ್ ಆಗಿದೆ. ಘಟನಾ ಸ್ಥಳದಲ್ಲಿ ಟೈಮರ್ ಸಹ ಪತ್ತೆಯಾಗಿದೆ. ವ್ಯಕ್ತಿಯ ಚಟುವಟಿಕೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯದಲ್ಲಿಯೇ ಆತ ಸಿಕ್ಕಿ ಬೀಳುತ್ತಾನೆ ಎಂದು ಹೇಳಿದ್ದಾರೆ.
ಈ ಕುರಿತು ಸಮಗ್ರ ತನಿಖೆ ನಡೆಸಲು 8 ಪೊಲೀಸ್ ಅಧಿಕಾರಿಗಳ ವಿಶೇಷ ತಂಡ ರಚಿಸಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯ ತಂಡ, ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.