ಬೆಂಗಳೂರು: ವೈಟ್ ಫೀಲ್ಡ್ ಹತ್ತಿರದ ಬ್ರೂಕ್ ಫೀಲ್ಡ್ ಕುಂದಲನಹಳ್ಳಿ ಮುಖ್ಯರಸ್ತೆಯಲ್ಲಿನ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿರುವುದನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಖಚಿತಪಡಿಸಿದ್ದಾರೆ.
ಈ ಕುರಿತು ತನಿಖೆ ಆರಂಭಿಸಿರುವ ಅವರು, ಅನುಮಾನಾಸ್ಪದ ವಸ್ತುಗಳು ಸ್ಥಳದಲ್ಲಿ ಪತ್ತೆಯಾಗಿವೆ. 1 ಗಂಟೆಗೆ ಬಾಂಬ್ ಸ್ಫೋಟಗೊಂಡಿದೆ. ವಿಧಿ ವಿಜ್ಞಾನ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಇಲ್ಲಿಯವರೆಗೆ ಘಟನೆಯಲ್ಲಿ 9 ಜನ ಗಾಯಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಅವರು ಮಾಹಿತಿ ಪಡೆದಿದ್ದಾರೆ. ಎಫ್‌ಎಸ್‌ಎಲ್ ತಂಡದ ಪರಿಶೀಲನೆ ಬಳಿಕಪೂರ್ಣ ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ.
ಕೆಫೆಯ ಕೈ ತೊಳೆಯುವ ಜಾಗದಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಥಳದಲ್ಲಿ ಬ್ಯಾಟರಿ, ಬೋಲ್ಟ್‌ಗಳು ಪತ್ತೆಯಾಗಿವೆ. ಪೊಲೀಸರ ಜೊತೆ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು, ಭಯೋತ್ಪಾದನಾ ನಿಗ್ರಹ ದಳ ಭೇಟಿ ನೀಡಿದ್ದು ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದ್ದಾರೆ..